ಮುಷ್ಕರದಿಂದಾಗಿ ಈಶಾನ್ಯ ಸಾರಿಗೆ ಸಂಸ್ಥೆಗೆ 59 ಕೋಟಿ ರೂ.ಗಳ ನಷ್ಟ

ಕಲಬುರಗಿ.ಏ.19: ಸಾರಿಗೆ ನೌಕರರ ಮುಷ್ಕರ ಆರಂಭವಾಗಿ ಎರಡು ವಾರಗಳು ಕಳೆದಿವೆ. ಇದರ ಪರಿಣಾಮ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇಲ್ಲಿಯವರೆಗೆ ಸುಮಾರು 59 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮರಾವ್ ಅವರು ಹೇಳಿದ್ದಾರೆ.
ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಮನವೊಲಿಕೆ, ವರ್ಗಾವಣೆ, ವಜಾ ಹೀಗೆ ಸರ್ಕಾರದ ಹಲವು ತಂತ್ರಗಳ ಪ್ರಯೋಗದಿಂದ ಕೆಲವು ನೌಕರರು ಮರಳಿ ಸೇವೆಗೆ ಬಂದಿದ್ದಾರೆ. ಈ ಪ್ರಯ್ನದ ಫಲವಾಗಿ ಸಂಸ್ಥೆಯ ವ್ಯಾಪ್ತಿಯಲ್ಲಿ ಈಗಾಗಲೇ 1,229 ಬಸ್‍ಗಳನ್ನು ರಸ್ತೆಗೆ ಇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಕೂಡ ಮುಂದುವರೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರವೂ ಸಹ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಸಂಚಾರವೇ ಹೆಚ್ಚಿನ ಸಂಖ್ಯೆಯಲ್ಲಿತ್ತು. ಕೇವಲ ಬೆರಳೆಣಿಕೆಯಷ್ಟು ಬಸ್‍ಗಳು ಸಂಚರಿಸಿದವು. ನಗರದಲ್ಲಿ ಆಟೋಗಳ ಮೂಲಕ ಪ್ರಯಾಣಿಕರು ಪ್ರಯಾಣಿಸುವುದು ಸರ್ವೆ ಸಾಮಾನ್ಯವಾಗಿತ್ತು.