ಮುಷ್ಕರದಲ್ಲಿ ಪಾಲ್ಗೊಳ್ಳಲು ಪರವಾನಗಿಗೆ ಮನವಿ ಸಲ್ಲಿಕೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 18 : –  ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಾಳೆ  ನಡೆಯುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ  ಪಟ್ಟಣದಲ್ಲಿ ತಹಸಿಲ್ದಾರ್ ಟಿ.ಜಗದೀಶ್ ಅವರಿಗೆ ಗ್ರಾಮ ಸಹಾಯಕರು ಮಂಗಳವಾರ ಮನವಿ ಸಲ್ಲಿಸಿದರು.
ಕಳೆದ 40 ವರ್ಷಗಳಿಂದ ಕಡಿಮೆ ಸಂಬಳಕ್ಕೆ ಕರ್ತವ್ಯ ನಿರ್ವಹಿಸುವ ಗ್ರಾಮ ಸಹಾಯಕರನ್ನು ಸರಕಾರ ಡಿ ದರ್ಜೆಗೇರಿಸಿ ಸಂಬಳ ಹೆಚ್ಚಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ  ವರ್ಷದ ಬಜೆಟ್‌ನಲ್ಲಿ ಗ್ರಾಮ ಸಹಾಯಕರಿಗೆ ಕೇವಲ ಒಂದು ಸಾವಿರ ರೂ. ಮಾತ್ರ ವೇತನವನ್ನು ಸರಕಾರ ಹೆಚ್ಚಿಸಿತ್ತು. ಹೀಗಾಗಿ, ರಾಜ್ಯದ ಎಲ್ಲಾ ಗ್ರಾಮ ಸಹಾಯಕರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ತಾಲೂಕಿನ ಗ್ರಾಮ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದು ಅದಕ್ಕಾಗಿ ಪರವಾನಗಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಟಿ.ಜಗದೀಶ್ ಅವರು ಗ್ರಾಮ ಸಹಾಯಕರ ಮನವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗ್ರಾಮ ಸಹಾಯಕರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಸಹಾಯಕರಾದ ಚಂದ್ರಣ್ಣ, ಕಲ್ಲಹಳ್ಳಿ ತಿಪ್ಪೇಶ್, ಎಸ್.ಕೃಷ್ಣಮೂರ್ತಿ, ಕೊಟ್ರೇಶ್, ಹಾಲಸಾಗರ ಕೃಷ್ಣ, ಲೋಕಿಕೆರೆ ಶಾಂತಕುಮಾರ್, ಹೊಸಹಳ್ಳಿ ಬೋರಣ್ಣ, ಮಹೇಶ್ ಇತರರಿದ್ದರು.