
ಬಸವಕಲ್ಯಾಣ:ಎ.3: ಕಾಂಗ್ರೆಸ್ ಪಕ್ಷ ಸಂಪೂರ್ಣ ಮುಳುಗುವ ಹಂತದಲ್ಲಿದೆ. ಹೀಗಾಗಿ ಜೆಡಿಎಸ್ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ 40 ಹಾಗೂ 2018ರಲ್ಲಿ 38 ಸ್ಥಾನಗಳಲ್ಲಿ ಜೆಡಿಎಸ್ ವಿಜಯ ಸಾ ಧಿಸಿತ್ತು. ಆದರೆ 5 ವರ್ಷ ಆಡಳಿತ ಮಾಡಿ ವಿವಿಧ ಭಾಗ್ಯಗಳು ಜಾರಿಗೆ ತಂದಿದ್ದರೂ ಕಾಂಗ್ರೆಸ್ ಕೇವಲ 78 ಸ್ಥಾನಗಳಲ್ಲಿ ವಿಜಯ ಸಾ ಧಿಸಿದೆ. ರಾಜ್ಯದ 17 ಕಡೆ ನಡೆದ ಉಪ ಚುನಾವಣೆಯಲ್ಲಿ ಒಂದು ಕಡೆಯೂ ಗೆದ್ದಿಲ್ಲ. ಇದರಿಂದ ಕಾಂಗ್ರೆಸ್ ಸ್ಥಿತಿ ಮುಂದೆ ಏನಾಗಲಿದೆ ಎಂದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು. ಬಸವಕಲ್ಯಾಣ ಉಪ ಚುನಾವಣೆ ವಾತಾವರಣ ನೋಡಿದರೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಫ್ ಅಲಿ ಗೆಲ್ಲುವುದು ಖಚಿತ.ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಏ.5ರಿಂದ ಇಲ್ಲಿಯೇ ವಾಸ ಮಾಡುತ್ತೇನೆ ಎಂಬ ಸಂದೇಶ ನೀಡಿದ್ದು, ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಸಂದೇಶ ಕೊಡಬೇಕೆಂಬ ಉದ್ದೇಶ ನಮ್ಮ ನಾಯಕರದ್ದಾಗಿದೆ ಎಂದು ತಿಳಿಸಿದರು. ಬಿಜೆಪಿಯೊಂದಿಗೆ ನಾವು ಒಪ್ಪಂದ ಮಾಡಿಕೊಂಡಿಲ್ಲ. ನಮ್ಮ ಹತ್ತಿರ ತಾಲೂಕು ಅಧ್ಯಕ್ಷ ಸೇರಿದಂತೆ ಸಾಕಷ್ಟು ಜನ ಟಿಕೆಟ್ ಕೇಳಿದ್ದರು. ಕೊನೆಯಲ್ಲಿ ಎಲ್ಲರು ಸೇರಿ ಸೈಯದ್ ಯಶ್ರಫ್ ಅಲಿ ಅವರ ಹೆಸರು ಅಂತಿಮಗೊಳಿಸಲಾಯಿತು ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅವರ ವೈಯಕ್ತಿಕ ವಿಚಾರ. ನಮ್ಮ ಕಾರ್ಯಕರ್ತರು ನಮ್ಮ ಜತೆ ಇದ್ದಾರೆ, ಅವರ ಜತೆ ಹೋಗುವವರು ಹೋಗಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಅವರ ಜತೆ ಹೋಗಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೋಲಪುರ, ತಾಲೂಕು ಅಧ್ಯಕ್ಷ ಶಬ್ಬೀರ್ ಪಾಶಾ, ಅಭ್ಯರ್ಥಿ ಸೈಯದ್ ಯಶ್ರಫ್ ಅಲಿ, ಜಿಪಂ ಸದಸ್ಯ ಆನಂದ ಪಾಟೀಲ, ಆಕಾಶ ಖಂಡಾಳೆ ಸೇರಿದಂತೆ ಇತರರು ಇದ್ದರು.