ಮುಳುಗಿದ ಜೋಡಿ ರಸ್ತೆ: ಪರದಾಡಿದ ವಾಹನ ಸವಾರರು

ಚಾಮರಾಜನಗರ, ಮೇ.31:- ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಅವ್ಯವಸ್ಥೆ ಅನಾವರಣಗೊಂಡಿತು.
ಮಂಗಳವಾರ ಮಧ್ಯಾಹ್ನದ ನಂತರ ಕೇವಲ ಅರ್ಧ ಗಂಟೆಗಳ ಕಾಲ ಬಿದ್ದ ಭಾರಿ ಮಳೆಯಿಂದ ಜೋಡಿ ರಸ್ತೆಯುಕೆರೆಯಂತಾಯಿತು. ಜೋಡಿ ರಸ್ತೆಯಲ್ಲಿ 3-4 ಅಡಿ ನೀರು ನಿಂತಿದ್ದರಿಂದ ಒಂದೂವರೆ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಮಳೆ ನಿಂತ ಬಳಿಕವೂ ವಾಹನ ಸವಾರರು ನೀರಿನಲ್ಲಿ ಸಿಲುಕಿ ಹಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದ ಘಟನೆಯೂ ನಡೆಯಿತು. ರಸ್ತೆಯ ಒಂದು ಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾದರೇ ಹಲವು ಅಂಗಡಿಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿದೆ
ಮಳೆ ಬಂದಾಗ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಾಗುವ ಅವಾಂತರದ ಬಗ್ಗೆ ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಕೂಡ ಜಿಲ್ಲಾಡಳಿತವಾಗಲೀ, ನಗರಸಭೆಯಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಈ ಬಗ್ಗೆ ಯಾವುದೇ ಕ್ರಮವಹಿಸಿರುವುದಿಲ್ಲ.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಗರದಲ್ಲಿ ಮಳೆ ಆರಂಭವಾಗಿ 3.30ರವರೆಗೆ ಜೋರಾಗಿ ಸುರಿಯಿತು. ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಮಳೆ ನೀರು, ರಾಜಕಾಲುವೆ ನೀರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಲುವೆಯಂತೆ ಹರಿಯಲಾರಂಭಿಸಿತು. ಮಳೆ ನಿಂತ ಬಳಿಕ ವಾಹನ ಸವಾರರ ಓಡಾಟ ಆರಂಭವಾಯಿತು. ರಸ್ತೆಯ ಎರಡೂ ಕಡೆಯಿಂದ ಬಂದ ವಾಹನ ಸವಾರರು ಜಿಲ್ಲಾಡಳಿತ ಭವನದ ಗೇಟ್ ಬಳಿ ಕೆರೆಯಂತೆ ನಿಂತ ನೀರನ್ನು ನೋಡಿ ಬೆಚ್ಚಿಬಿದ್ದರು.
ನೀರಿನಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ಓಡಿಸಿಕೊಂಡು ಹೋದ ಕೆಲವರು ವಾಹನಗಳ ಚಕ್ರ ಜಾರಿ ಕೆಳಗೆ ಬಿದ್ದರು. ಮಳೆ ನೀರಾದರೆ ಸರಿ. ಆದರೆ ಚರಂಡಿಯ ಬಗ್ಗಡದ ನೀರು ನಿಂತಿದ್ದರಿಂದಾಗಿ ಜನರು ಫಜೀತಿ ಅನುಭವಿಸಿದರು.
ಜಿಲ್ಲಾಡಳಿತ ಭವನದ ಗೇಟಿನ ಮುಂಭಾಗ ಈ ಮಳೆ ನೀರು ಚರಂಡಿ ಸೇರುವಂತೆ ಕಬ್ಬಿಣದ ಕಂಬಿಗಳನ್ನು ನೆಲಕ್ಕೆ ಹಾಕಲಾಗಿದೆ. ಮಳೆ ನೀರು ಬಂದು ಆ ಕಬ್ಬಿಣದ ಕಂಬಿಗಳು ಮುಚ್ಚಿ ಹೋಗಿ, ದ್ವಿಚಕ್ರ ವಾಹನ ಸವಾರರು ಕಂಬಿಯ ಮೇಲೆ ವಾಹನ ಚಲಾಯಿಸಿ ಕೆಳಗೆ ಬೀಳಬೇಕಾಯಿತು. ಅನೇಕರು ಬಿದ್ದು ಕೈಕಾಲು ಗಾಯ ಮಾಡಿಕೊಂಡರು.
ಪ್ರತಿ ಬಾರಿ ನಗರದಲ್ಲಿ ಮಳೆ ಬಂದಾಗಲೂ ಪದೇ ಪದೇ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಈ ಅವಾಂತರ ನಡೆಯುತ್ತಲೇ ಇರುತ್ತವೆ. ಮಾಮೂಲಿಯಾಗಿದೆ. ಇದನ್ನು ಸರಿಪಡಿಸಲು ಜನಪ್ರತಿನಿಧಿಗಳನ್ನು ಜನರು ನಿಂದಿಸಿದರು. ಸತತವಾಗಿ ನಾಲ್ಕು ಬಾರಿ ಗೆದ್ದು ಬಂದರೂ ಶಾಸಕ ಪುಟ್ಟರಂಗಶೆಟ್ಟಿಯವರು ಈ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯ ಕೊನೆ ಹಂತ ಚುರುಕಾಗಿದ್ದು ಇಂದು ಚಾಮರಾಜನಗರ ಹಾಗೂ ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಇಂದಿನ ಮಳೆ. ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ 3 ದಿನ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.