ಮುಳುಗಡೆಯ ಭೀತಿಯಲ್ಲಿ ಕಂಪ್ಲಿ-ಗಂಗಾವತಿ ಸೇತುವೆ


ಸಂಜೆವಾಣಿ ವಾರ್ತೆ
ಕಂಪ್ಲಿ, ಆ. 03 ತುಂಗಭದ್ರಾ ಜಲಾಶಯ ದಿಂದ ಬುಧವಾರ ಬೆಳಗ್ಗೆ 78,954 ಕ್ಯೂಸೆಕ್ಸ್  ನೀರು ಹರಿಯ ಬಿಟ್ಟಿದ್ದು, ಇಲ್ಲಿನ ಕೋಟೆ ಬಳಿಯ ಕಂಪ್ಲಿ-ಗಂಗಾವತಿ ಸೇತುವೆ 1ತಿಂಗಳೊಳಗೆ ಮತ್ತೊಮ್ಮೆ ಮುಳುಗಡೆಯಾಗುವ ಭೀತಿ ಈ ಭಾಗದ ಜನರಲ್ಲಿ ಉಂಟಾಗಿದೆ.
ಜು. 13 ರಿಂದ ಈ ವರೆಗೆ ಒಟ್ಟು 21 ದಿನಗಳಿಂದ ಬಸ್ಸು ಮತ್ತು ಸೇರಿದಂತೆ ಭಾರಿ ವಾಹನಗಳ ಸಂಚಾರ ಸ್ಥಗಿತ ಗೊಳಿಸಲಾಗಿದೆ. ಸೇತುವೆ ಮುಳುಗಡೆ ಯಾದಲ್ಲಿ ಕಂಪ್ಲಿ ಭಾಗದ ಕಾರ್ಮಿಕ ರು, ಕ್ರುಷಿಕರು, ವ್ಯಾಪಾರಸ್ಥರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಇತರರು ಗಂಗಾವತಿಗೆ ಸುತ್ತಿ ಬಳಸಿ ಹೋಗಬೇಕಾದ ಸಂಕಷ್ಟ ಪರಿಸ್ಥಿತಿ ಉಂಟಾಗಲಿದೆ.
ತಹಶೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ನೀರಿನ ಪ್ರಮಾಣ 1.25 ಲಕ್ಷಕ್ಕೆ ಏರುವ ಸೂಚನೆ ಯಿದ್ದು, ನದಿ ಪಾತ್ರದ ಜನತೆ ಸೇತುವೆ ಬಳಿ ಹೋಗಬಾರದು, ನೀರಿಗೆ  ಇಳಿಯಬಾರದು. ಸುರಕ್ಷಿತ ಸ್ಥಳಗಳಿಗೆ ತೆರಳಲು ಜಾಗ್ರತೆ ತೋರಬೇಕು. ಸತತ 3 ದಿನ ಮಳೆ ಬೀಳುವ ಸಂಭವವಿರುವುದರಿಂದ ತಾಲೂಕು ಕಚೇರಿಯಲ್ಲಿ 08394-295554 ಸಹಾಯ ವಾಣಿ ತೆರೆಯಲಾಗಿದ್ದು, ಮಳೆಯಿಂದ ತೊಂದರೆ ಗೆ ಒಳಗಾದವರು ಕರೆ ಮಾಡಲು ತಿಳಿಸಿದ್ದಾರೆ.
ಧಾರಾಕಾರ ಮಳೆಗೆ 6 ಮನೆಗಳು ಬಿದ್ದಿವೆ. ಕಂದಾಯ, ಕೃಷಿ ಇಲಾಖೆ ಸಮೀಕ್ಷೆ ನಡೆಸಿದ ಪ್ರಕಾರ ಇಟಿಗಿ, ಸಣಾಪುರ, ಬೆಳಗೋಡು, ನಂ.2.ಮುದ್ದಾಪುರ ಗ್ರಾಮಗಳಲ್ಲಿ 57 ಹೆಕ್ಟೇರ್ ಭತ್ತದ ಬೆಳೆ ಹಾನಿ ಯಾಗಿದ್ದು, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.