ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯ ಕಳಪೆ ಕಾಮಗಾರಿ ತನಿಖೆಗೆ ಆಗ್ರಹ

ವಿಜಯಪುರ,ಜೂ.15: ಮುಳವಾಡ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿರುವ ಜಯ ಕರ್ನಾಟಕ ಸಂಘಟನೆ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ ಅವರು ಮಾತನಾಡಿ, ತಾಳಿಕೋಟೆ ತಾಲೂಕಿನ ಬಂಟನೂರ ಗ್ರಾಮದ ಸರ್ವೇ ನಂ. 178/1,2 ಈ ಜಮೀನದಲ್ಲಿ ಮುಖ್ಯ ಕಾಲುವೆ ಅಕ್ವಾಡೆಕ್ಕೆ ಹಾಗೂ ಏಂಬೆಕಮೆಂಟ್ ಕಾಮಗಾರಿ ಕೈಗೊಂಡಿದ್ದು, ಇದು ಕಳಪೆ ಮಟ್ಟದಿಂದ ಕೂಡಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕಾಲುವೆಗೆ ಜ. 19ರಂದು ಪ್ರಾಯೋಗಿಕವಾಗಿ ನೀರು ಹರಿಸಿದ್ದು ಕಾಲುವೆಯ ನೀರು ಜಮೀನಿಗೆ ನುಗ್ಗಿ ಅಪಾರ ಹಾನಿ ಉಂಟು ಮಾಡಿದೆ. ಆದಷ್ಟು ಬೇಗ ತಾವು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥ ಗುತ್ತಿಗೆದಾರರು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೂ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಕೆ.ಬಿ.ಜೆ.ಎನ್.ಎಲ್ . ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಆದೇಶ ಮಾಡಿ ಹಾಗೂ ಕಳಪೆ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಸಂಗಮೇಶ ದಾಸನಗೌಡ್ರು , ಪಿಂಟು ಗಬ್ಬೂರ, ಮುಕ್ಕದ್ದಸ್ ಇನಾಮದಾರ, ತಾಲೂಕ ಮುಖಂಡ ಬಸವರಾಜ ಸಿಂಗನಹಳ್ಳಿ, ಜಿಲ್ಲಾ ಮುಖಂಡ ಸಂಗಮೇಶ ಹಿರೇಮಠ, ಉಮೇಶ ರುದ್ರಮನಿ, ಸಂತೋಷ ಶ್ಯಾಪೇಟಿ, ಮಹಿಳಾ ಮುಖಂಡರಾದ ಸುಜಾತ ಪೂಜಾರಿ, ಮಲ್ಲಮ್ಮ ಲಮಾಣಿ, ಕವಿತಾ ಹಲ್ಲೋಳಿ, ಬೇಬಿ ತಳವಾರ, ಸುವರ್ಣ ಹಳ್ಳಿ, ನಾಗಮ್ಮ ವಾಲೀಕಾರ. ರಾಜಶ್ರೀ ವಾಲಿಕಾರ, ಅಶ್ವಿನಿ ಸಾವಂತ್, ಲಕ್ಷ್ಮಿ ದಾಸವಾಳ ಇತರರು ಉಪಸ್ಥಿತರಿದ್ದರು.