ಮುರ್ಮು ಹುಟ್ಟೂರಿನಲ್ಲಿ ಸಂಭ್ರಮ

ನವದೆಹಲಿ,ಜು.೨೧- ದೇಶದ ೧೫ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗೆಲುವಿನ ನಿರೀಕ್ಷೆಯಲ್ಲಿರುವ ಅವರ ಹುಟ್ಟೂರು ಒಡಿಶಾದ ರಾಯರಂಗ್‌ಪುರದಲ್ಲಿ ಸಂಭ್ರಮ ಮೂಡಿದ್ದು, ದ್ರೌಪದಿ ಮುರ್ಮು ಅವರ ವಿಜಯೋತ್ಸವವನ್ನು ಆಚರಿಸಲು ಸಿದ್ಧತೆಗಳು ನಡೆದಿವೆ.
ರಾಯರಂಗ್‌ಪುರದ ಜನ ಸಿಹಿ ತಿಂಡಿಗಳನ್ನು ಸಿದ್ಧಪಡಿಸಿದ್ದು, ಸುಮಾರು ೨೦ ಸಾವಿರ ಜನರಿಗೆ ಸಿಹಿ ತಿಂಡಿ ಹಂಚಿಕೆಯಾಗಲಿದೆ. ಇಂದು ಸಂಜೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜಯೋತ್ಸವದ ಮೆರವಣಿಗೆಯನ್ನು ಊರಿನಲ್ಲಿ ಆಯೋಜಿಸಲಾಗಿದೆ.
ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ, ವಿಶೇಷ ಬುಡಕಟ್ಟು ನೃತ್ಯದ ಮೂಲಕ ವಿಜಯೋತ್ಸವ ಆಚರಣೆಗೆ ರಾಯರಂಗ್‌ಪುರದ ಜನತೆ ಎಲ್ಲ ತಯಾರಿ ನಡೆಸಿದ್ದಾರೆ.
ದೇಶದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿಮುರ್ಮು ಆಯ್ಕೆ ಖಚಿತವಾಗಿದ್ದು, ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿರುವುದು ರಾಯರಂಗ್‌ಪುರಕ್ಕೆ ಮಾತ್ರವಲ್ಲ. ಒಡಿಶಾಗೆ ಇದು ದೊಡ್ಡ ದಿನವಾಗಿದೆ. ಬುಡಕಟ್ಟು ಮಹಿಳೆಯೊಬ್ಬರು ರಾಷ್ಟ್ರಪತಿಯಾಗುತ್ತಿರುವ ಸಂಭ್ರಮದಲ್ಲಿ ಇಡೀ ಜನ ಸಂತಸದಿಂದ ತೇಲಾಡುತ್ತಿದ್ದಾರೆ.
ದ್ರೌಪದಿಮುರ್ಮು ಅವರು ೧೯೬೮ ರಿಂದ ೭೦ರವರೆಗೂ ರಾಂiiರಂಗ್‌ಪುರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಬಿಸ್ವೇಶ್ವರ ಮೊಹಾಂತಿ, ಮುರ್ಮು ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ ಒಮ್ಮೆ ಭವಿಷ್ಯದಲ್ಲಿ ಏನಾಗುತ್ತೀರಾ ಎಂದು ವಿದ್ಯಾರ್ಥಿಗಳನ್ನು ಕೇಳಿದ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ವೃತ್ತಿಗಳ ಹೆಸರೇಳಿದ್ದರೆ ದ್ರೌಪದಿ ಮುರ್ಮು ಅವರು ಮಾತ್ರ ಜನಸೇವೆ ಮಾಡುವುದಾಗಿ ಹೇಳಿದ್ದು ನನ್ನ ನೆನಪಿನಲ್ಲಿದೆ ಎಂದು ಹೇಳಿದರು.
ಇದೇ ಶಾಲೆಯಲ್ಲಿ ಈಗ ಓದುತ್ತಿರುವ ತನುಶ್ರೀ, ನಮ್ಮ ಶಾಲೆಯಲ್ಲಿ ಓದಿದ ದ್ರೌಪದಿಮುರ್ಮು ಅಕ್ಕ ರಾಷ್ಟ್ರಪತಿಯಾಗುತ್ತಿರುವುದು ನಮಗೆ ಹೆಮ್ಮೆ. ನಾವು ಇದೇ ಶಾಲೆಯಲ್ಲಿ ಓದುತ್ತಿರುವುದು ಸಂತಸ ತಂದಿದೆ. ಅವರಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.