ಮುರ್ಮು, ಮೋದಿ, ಗಣ್ಯರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ

ನವದೆಹಲಿ,ಏ.೧೪-ಸಂವಿಧಾನ ಶಿಲ್ಪಿ, ಹಾಗೂ ಅರ್ಥಶಾಸ್ತ್ರಜ್ಞ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗ್‌ದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮತ್ತಿತರ ಗಣ್ಯರು ಸಂಸತ್ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ ಶಿಲ್ಪಿ, ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಎಲ್ಲ ನಾಗರಿಕರಿಗೆ ಆತ್ಮೀಯ ಶುಭಾಶಯಗಳನ್ನು ಕೋರುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಜಗ್‌ದೀಪ್ ಧನಕರ್ ಅವರು ಬಾಬಾಸಾಹೇಬರು ಭಾರತೀಯ ಸಂವಿಧಾನದ ಶಿಲ್ಪಿ ಮಾತ್ರವಲ್ಲದೇ ಸಾಮಾಜಿಕ ನ್ಯಾಯದ ಪ್ರತಿಪಾದಕರೂ ಆಗಿದ್ದರು. ನಾಗರಿಕ ಸ್ವಾತಂತ್ರ್ಯ, ಲಿಂಗ ಸಮಾನತೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಸಾಂವಿಧಾನಿಕ ಚೌಕಟ್ಟಿನ ಮೂಲಕ ಉತ್ತೇಜನ ನೀಡಿದ್ದರು. ಸಾಮಾಜಿಕ ಬದಲಾವಣೆ ಹಾಗೂ ಸಮಾನತಾವಾದಿ ಭಾರತ ನಿರ್ಮಾಣದ ಪ್ರವರ್ತಕರಾಗಿದ್ದರು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ ೧೮೯೧ರಲ್ಲಿ ಮಹಾರಾಷ್ಟ್ರದ ಮಾಹೋದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ತತ್ವ, ಆದರ್ಶಗಳು ದಮನಿತರಿಂದ ಹಿಡಿದು ಸಮ ಸಮಾಜದ ಚಿಂತಕರಿಗೆ ಸ್ಫೂರ್ತಿದಾಯಕವಾಗಿವೆ ಎಂದಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನದ ಶಿಲ್ಪಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಹೋರಾಟ ಅನನ್ಯವಾದುದು. ಅಂಬೇಡ್ಕರರ ಜನ್ಮ ದಿನಾಚರಣೆಯಂದು, ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯದ ಅವರ ವಿಚಾರಗಳಿಗೆ ನಮ್ಮ ಅಚಲ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.