ಮುರ್ಮು ಗೆಲುವು ಖಚಿತ: ಸಿಎಂ

ಬೆಂಗಳೂರು, ಜು. ೧೮- ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ದಾಖಲೆ ಮತದಿಂದ ಗೆಲ್ಲುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ದಕ್ಷ ಆಡಳಿತಗಾರರಾಗಿ, ಶಾಸಕರಾಗಿ, ಸಚಿವರಾಗಿ ರಾಜ್ಯಪಾಲೆಯಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಜತೆಗೆ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಬುಡಕಟ್ಟು ಸಮುದಾಯದವರು ಉನ್ನತ ಹುದ್ದೆಗೆ ಏರಬಹುದು ಎಂಬುದು ನ್ಮಮ ಪ್ರಜಾಪ್ರಬುತ್ವದ ಹಿರಿಮೆ, ಗರಿಮೆಯನ್ನು ತೋರಿಸುತ್ತದೆ ಎಂದರು.
ಪ್ರಧಾನಿ ಮೋದಿ ಅವರು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸುವ ಮೂಲಕ ದೇಶದಲ್ಲಿ ಒಂದು ಸಂಚಲನ ಮೂಡಿಸಿ, ಸಂದೇಶ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿ, ದಾಖಲೆ ಮತಗಳಿಂದ ಮುರ್ಮು ಅವರು ಆಯ್ಕೆಯಾಗಲಿದ್ದಾರೆ ಎಂದರು.
ಬಿಎಸ್‌ವೈ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದ್ರೌಪದಿಮುರ್ಮು ಅವರು ನೂರಕ್ಕೆ ನೂರರಷ್ಟು ಗೆಲ್ಲುವುದು ನಿಶ್ಚಿತ. ಅವರ ಆಯ್ಕೆ ಸರ್ವಾನುಮತದಿಂದ ಆಗಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಹಾಕಿದೆ ಎಂದು ಅಸಮಾಧಾನ ಹೊರ ಹಾಕಿದರು.
ಬಿಜೆಪಿಯ ಎಲ್ಲ ಶಾಸಕರು ಮುರ್ಮು ಅವರಿಗೆ ಮತ ಹಾಕಿದ್ದಾರೆ. ಅವರ ಗೆಲುವು ನಿಶ್ಚಿತ ಎಂದು ಹೇಳಿದರು.