ಮುರುಡೇಶ್ವರ ಶಿವನ ಪ್ರತಿಮೆ ಮೇಲೆ ಉಗ್ರರ ಕಣ್ಣು

ಭಟ್ಕಳ, ನ. ೨೩- ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳ ಮುರುಡೇಶ್ವರದ ಮೇಲೆ ಇದೀಗ ಐಸಿಸ್ ಉಗ್ರರ ಕರಿನೆರಳು ಬಿದ್ದಿರುವುದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಅರಬ್ಬಿ ಸಮುದ್ರದಿಂದ ಸುತ್ತುವರೆದಿರುವ ಮುರುಡೇಶ್ವರ, ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವೂ ಹೌದು.
ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿದ ಫೋಟೊವೊಂದು ಐಸಿಸ್‌ನ ಮ್ಯಾಗ್‌ಜಿನ್ ಮುಖಪುಟಕ್ಕೆ ಬಳಸಿಕೊಂಡಿರುವುದು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅನ್ಸುಲ್ ಸಕ್ಸೆನಾ ಎಂಬುವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಐಸಿಸ್ ಮ್ಯಾಗ್‌ಜಿನ್, ’ದಿ ವಾಯ್ಸ್ ಆಫ್ ಹಿಂದ್’ನ ಮುಖಪುಟಕ್ಕೆ ಈ ಫೋಟೊವನ್ನು ಹಾಕಿದ್ದು, ಅದರ ಮೇಲೆ ’ಹಿಟ್ಸ್ ಟೈಮ್ ಟು ಬ್ರೇಕ್ ಫಾಲ್ಸ್ ಘಾಟ್ಸ್’ ಎಂಬ ಬರಹವನ್ನು ಮುದ್ರಿಸಲಾಗಿದೆ.
ಬೃಹದಾಕಾರದ ಶಿವನ ಪ್ರತಿಮೆಯ ರುಂಡ ಕತ್ತರಿಸಿ ಅದರ ತುದಿಯಲ್ಲಿ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಿಗೊಳಿಸಿದ ಚಿತ್ರವನ್ನು ಬಳಕೆ ಮಾಡಲಾಗಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಅನ್ಸುಲ್ ಸಕ್ಸೆನಾ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಐಸಿಸ್ ಪ್ರಚಾರದ ಮಾಸಿಕವಾಗಿರುವ ಆನ್‌ಲೈನ್ ನಿಯತಕಾಲಿಕ ವಾಯ್ಸ್ ಆಫ್ ಹಿಂದ್‌ನ ಉತ್ಪಾದನೆ ಪ್ರಸರಣದಲ್ಲಿ ಸಕ್ರಿಯವಾಗಿ ಆರೋಪಕ್ಕೆ ಗುರುಯಾಗಿರುವ ಭಟ್ಕಳದ ಜಫ್ರಿಜವಾಹರ್ ದಾಮೂದಿ ತೊಡಗಿಕೊಂಡಿದ್ದನು. ಹೀಗಾಗಿ, ಜಫ್ರಿಯನ್ನು ೨೦೨೦ರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ರಾಜ್ಯ ಪೊಲೀಸರ ತಂಡ ಬಂಧಿಸಿತ್ತು.
ಜಫ್ರಿ ಮೂಲಭೂತ ವಾದಿಗಳಿಂದ ಪ್ರಭಾವಿತನಾಗಿ ದೇಶದಲ್ಲಿ ಐಸಿಸ್ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಜ್ಜಾಗಿದ್ದನು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಬೂ ಜಝೀರ್ ಅಲ್ ಬದ್ರಿ ಹೆಸರಿನಲ್ಲಿ ಖಾತೆಗಳನ್ನು ಹಾಗೂ ಯು ಟೂಬ್ ಚಾನಲ್ ತೆರೆದು ಜಿಹಾದಿ ಬೋಧಿಸುತ್ತಿದ್ದ.
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಐಸಿಸ್ ನಾಯಕರ ಜತೆ ನೇರ ಸಂಪರ್ಕ ಹೊಂದಿದ್ದ ಈತ ಐಸಿಸ್ ಕಮಾಂಡರ್‌ಗಳ ಸೂಚನೆ ಮೇರೆಗೆ ಭಾರತದಲ್ಲಿ ಐಸಿಸ್‌ಗೆ ಯುವಕರನ್ನು ನೇಮಕ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಜಫ್ರಿ ಬಂಧನದ ವಿರುದ್ಧ ಸೇಡು ತೀರಿಸಿಕೊಳ್ಳಲು ಐಸಿಸ್ ಉಗ್ರರು ಮುರುಡೇಶ್ವರದ ಮೇಲೆ ಸಂಚು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.