ಮುರುಘಾ ಮಠ ಆಡಳಿತ ಡಿಸಿ ವರದಿ ಆಧರಿಸಿ ತೀರ್ಮಾನ

ಚಿತ್ರದುರ್ಗ, ನ.೨೩: ಮುರುಘಾ ಮಠದ ಆಡಳಿತಾತ್ಮಕ ಕಾರ್ಯವೈಖರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನೀಡಿರುವ ವರದಿಯ ಬಗ್ಗೆ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾಧಿಕಾರಿಗಳು ಮುರುಘಾ ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ನೀಡಿರುವ ವರದಿ ಕಾನೂನು ಇಲಾಖೆಯಲ್ಲಿದ್ದು, ಇದನ್ನು ಕೂಲಂಕುಶವಾಗಿ ಪರಿಶೀಲಿಸಿ ಆದಷ್ಟು ಬೇಗ ಮುರುಘಾ ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ತೀರ್ಮಾನ ಮಾಡಲಾಗುವುದು ಎಂದರು.ನಗರದಲ್ಲಿ ಇಂದು ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆಗಸ್ಟ್ ತಿಂಗಳಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಪ್ರಪ್ತಾ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದರು, ಇದಾದ ಬಳಿಕ ಮುರುಘಾ ಮಠದ ಆಡಳಿತವನ್ನು ಸರ್ಕಾರವೇ ವಹಿಸಿಕೊಂಡು ನೂತನ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸೂಚನೆ ನೀಡಿತ್ತು, ಈ ಹಿನ್ನೆಲೆಯಲ್ಲಿ ನವೆಂಬರ್ ೧೦ ರಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ೭೫ ಪುಟಗಳ ವರದಿಯನ್ನು ನೀಡಿದ್ದಾರೆ. ಇದು ಯಾವ ಇಲಾಖೆಯಲ್ಲಿ ಇದೆ ಎಂಬುದನ್ನು ಕೂಡಲೇ ತರಿಸಿಕೊಂಡು ಪರಿಶೀಲನೆ ಮಾಡಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಬೊಮ್ಮಾಯಿ ತಿಳಿಸಿದರು.
ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಲು ಪಿತೂರಿ ನಡೆಸಲಾಗಿದೆ ಎಂದು ಪ್ರತ್ಯೇಕ ಪ್ರಕರಣವೊಂದರಲ್ಲಿ ಮಾಜಿ ಶಾಸಕರೊಬ್ಬರು ಜೈಲು ಸೇರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ಇದೀಗ ನ್ಯಾಯಾಲಯದಲ್ಲಿ ಇದ್ದು, ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದು, ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಹೇಳಿದರು.ಜೆಡಿಎಸ್ ಪಕ್ಷಕ್ಕೆ ಬಹುಮತ ಬಂದರೆ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಆಗಿ ಮಾಡಲಿದ್ದೇವೆ ಎಂಬ ಹೆಚ್.ಡಿ.ಕುಮಾರಸ್ವಾಮಿಯವರ ವೈಯಕ್ತಿಕ ಹೇಳಿಕೆ ಎಂದರು.ಚಿತ್ರದುರ್ಗ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವಿದೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸರಿಯಲ್ಲ, ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಮಂಡಿ ಶಸ್ತ್ರ ಚಿಕಿತ್ಸಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದಾರೆ ಎಂದರು.ರಾಜ್ಯದ ಪ್ರತಿ ಮನೆಗೆ ೧೦ ಸಾವಿರ ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.