ಮುರುಘಾ ಶ್ರೀ ಕೈದಿ ನಂ. ೨೨೧೬

ಚಿತ್ರದುರ್ಗ,ಸೆ.೨- ಪ್ರತಿನಿತ್ಯ ಮುರುಘಾ ಮಠದಲ್ಲಿ ಶಿವಪೂಜೆ ನೆರವೇರಿಸಿ ಭಕ್ತಸಮೂಹದೊಂದಿಗೆ ಮಠದ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಿದ್ದ ಕೋಟೆ ನಾಡಿನ ಬೃಹನ್ಮಠದ ಜಗದ್ಗುರು ಡಾ. ಮುರುಘಾ ಶರಣ ಶ್ರೀಗಳು ಇದೀಗ ಜೈಲು ವಾಸಿಯಾಗಿ ನಿದ್ದೆ ಇಲ್ಲದೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.
ಮತ್ತೊಂದೆಡೆ ಶ್ರೀಗಳ ಬಂಧನವಾಗಿರುವ ಹಿನ್ನೆಲೆಯಲ್ಲಿ ಮಠದಲ್ಲಿ ನೀರವ ಮೌನ ಆವರಿಸಿದೆ. ಪ್ರತಿನಿತ್ಯ ಬೆಳಿಗ್ಗೆ ಭಕ್ತರು ಮಠಕ್ಕೆ ಬಂದು ಗದ್ದುಗೆ ಪೂಜೆ ನೆರವೇರಿಸುತ್ತಿದ್ದರು. ಆದರೆ, ಗದ್ದುಗೆ ಹಾಗೂ ಮಠದ ಆವರಣ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.
ಮಠದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದು, ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಕೇವಲ ಮಠದ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಭಕ್ತ ಗಣವಿಲ್ಲದೆ ಆವರಣ ಖಾಲಿ ಖಾಲಿಯಾಗಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಮುರುಘಾ ಶರಣರು ಇದೀಗ ವಿಚಾರಣಾ ಕೈದಿಯಾಗಿದ್ದು, ಅವರಿಗೆ ೨೨೧೬ ಸಂಖ್ಯೆಯನ್ನು ನೀಡಲಾಗಿದೆ. ತಡರಾತ್ರಿಯಿಂದ ಜೈಲಿನಲ್ಲಿದ್ದ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ತದೊತ್ತಡ ಹಾಗೂ ಉಸಿರಾಟದಲ್ಲಿ ವ್ಯತ್ಯಾಸವಾಗಿರುವುದಾಗಿ ವರದಿಯಾಗಿದ್ದು, ವೈದ್ಯರು ಮೇಲಿಂದ ಮೇಲೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸಿದ್ದಾರೆ.
ಅನಾರೋಗ್ಯದ ಸಮಸ್ಯೆಯಿಂದ ವೈದ್ಯರು ಮೊದಲೇ ಮುರುಘಾ ಶ್ರೀಗಳಿಗೆ ಎದೆನೋವು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದು ಜೈಲಿನಲ್ಲಿ ಎದೆ ನೋವು ಕಾಣಿಸಿಕೊಂಡ ತಕ್ಷಣವೇ ಪೊಲೀಸರು ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹಿರಿಯ ವೈದ್ಯೆ ರೂಪಾ, ತಜ್ಞ ವೈದ್ಯರಾದ ಶಿವಕುಮಾರ್ ಸೇರಿ ಮೂವರು ವೈದ್ಯರ ನೇತೃತ್ವದಲ್ಲಿ ಶ್ರೀಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಇನ್ನೂ ಶ್ರೀಗಳ ಪರ ವಕೀಲ ಚಿತ್ರದುರ್ಗ ಜಿಲ್ಲಾ ಸರ್ಜನ್ ಡಾ. ಬಸವರಾಜ್‌ರಿಂದ ಮಾಹಿತಿ ಪಡೆದಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆ ಶಿಫ್ಟ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಶ್ರೀಗಳು ಎದೆ ನೋವಿನಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ತಿಳಿದು ಜನರ ದಂಡು ಹರಿದು ಬಂದಿದೆ. ತಂಡೋಪತಂಡವಾಗಿ ಹರಿದು ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಆಸ್ಪತ್ರೆಯೆಡೆಗೆ ಭಕ್ತಾದಿಗಳ ದಂಡು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಳಿಗ್ಗೆ ವಿಶ್ರಾಂತಿ ಮುಗಿಸಿ ಧ್ಯಾನದಲ್ಲಿ ತಲೀನರಾದರು. ಜೈಲಿನಲ್ಲಿರುವ ಇತರ ಕೈದಿಗಳಿಗೆ ನೀಡುವಂತೆ ಶ್ರೀಗಳಿಗೂ ಸಹ ನೀಡಲಾಯಿತು. ಬೆಳಿಗ್ಗೆ ೬ ಗಂಟೆಗೆ ಎದ್ದ ಶ್ರೀಗಳಿಗೆ ಔಷಧಿ ಮತ್ತು ಟೂತ್‌ಪೇಸ್ಟ್, ಬ್ರಶ್ ನೀಡಲಾಯಿತು. ಆದರೆ, ರಾತ್ರೋ ರಾತ್ರಿ ಮುರುಘಾ ಶ್ರೀಗಳ ಬಂಧನವಾಗಿರುವ ವಿಷಯ ತಿಳಿದು ಮಠದ ಸಿಬ್ಬಂದಿಗಳಿಗೆ ಆಘಾತವಾಗಿದೆ.
ಬಿಳಿ ಬಟ್ಟೆ ಹೊದ್ದು, ಪೊಲೀಸರಿಂದ ಬಂಧನಕ್ಕೊಳಗಾದ ಶ್ರೀಗಳನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಬಳಿಕ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಶ್ರೀಗಳ ಪರ ವಕೀಲ ಸ್ಥಳದಲ್ಲೇ ಜಾಮೀನು ಕೋರಿ
ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿ ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಒಬ್ಬ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರನ್ನು ಕೂಡ ವಿಚಾರಣೆ ನಡೆಸುತ್ತೇವೆ. ಸಾಕ್ಷ್ಯಾಧಾರ ಕಲೆ ಹಾಕಲು ವಿಳಂಬ ಆಯಿತು. ಆದ್ದರಿಂದ ಬಂಧನವೂ ವಿಳಂಬವಾಯಿತು. ಮುರುಘಾ ಶ್ರೀಗಳು ಸದ್ಯಕ್ಕೆ ಇಲ್ಲೇ ಇರುತ್ತಾರೆ. ಶ್ರೀಗಳ ಆರೋಗ್ಯ ಕುರಿತ ವರದಿಯನ್ನು ವೈದ್ಯರು ನ್ಯಾಯಲಯದ ಮುಂದೆ ನೀಡುತ್ತಾರೆ. ಅದನ್ನು ನೋಡಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
ಜಾಮೀನು ಅರ್ಜಿ:
ಶ್ರೀಗಳ ಪರವಾಗಿ ನ್ಯಾಯಾಲಯಕ್ಕೆ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿರುವುದರಿಂದ ರೆಗ್ಯುಲರ್ ಬೇಲ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ. ಸದ್ಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವತ್ತು ತನಿಖಾಧಿಕಾರಿಯಿಂದ ಪೊಲೀಸ್ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಶ್ರೀಗಳ ವಿಸ್ತೃತ ವಿಚಾರಣೆ ಅವಶ್ಯಕತೆಯಿದೆ.
ಸ್ಥಳ ಮಹಜರು:
ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳ ಮಹಜರು ಮಾಡಬೇಕಾದ ಅಗತ್ಯವಿದೆ ಅಲ್ಲದೆ ಆರೋಪಿಯ ಹೇಳಿಕೆ ದಾಖಲಿಸಬೇಕು. ಪೋಕ್ಸೊ ಕೇಸ್‌ನಡಿ ಆರೋಪಿಯ ಕೃತ್ಯದ ಸ್ಥಳ ಸೇರಿದಂತೆ ಕೆಲವು ಸ್ಥಳಗಳ ಮಹಜರು ಅವಶ್ಯಕತೆ ಇದೆ. ಸಾಕ್ಷಿಗಳನ್ನ ಸಂಗ್ರಹಿಸಬೇಕಿದೆ. ಹೀಗಾಗಿ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರು ಕೋರ್ಟ್‌ಗೆ ಜಾಮೀನು ನೀಡಿದಂತೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಶ್ರೀಗಳಿಗೆ ಎದೆ ನೋವು ಬೆಂಗಳೂರಿಗೆ ಶಿಫ್ಟ್
ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ವರ್ಗಾಯಿಸಲು ವೈದ್ಯರು ತೀರ್ಮಾನಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ತಜ್ಞ ವೈದ್ಯರ ತಂಡ ತಪಾಸಣೆ ನಡೆಸಿ ಹೆಚ್ಚಿನ ಪರೀಕ್ಷೆಗಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದಾರೆ. ಹೃದಯ ಪರೀಕ್ಷೆ ವರದಿ ಆಧರಿಸಿ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಸುದ್ದಿಗಾರರೊಂದಿಗೆ ಮಾತನಾಡಿ ಮುರುಘಾ ಶ್ರೀಗಳಿಗೆ ಎದೆ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗುತ್ತಿದೆ. ತಜ್ಞವೈದ್ಯರ ವರದಿಯಾಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾ ಕಾರಾಗೃಹದಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಯಿತು.ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೊರ ರೋಗಿ ಚಿಕಿತ್ಸಾ ಕೇಂದ್ರದಲ್ಲಿ ತಪಾಸಣೆ ನಡೆಸಲಾಯಿತು.
ವೈದ್ಯಾಧಿಕಾರಿ ಶಿವಕುಮಾರ, ವೈದ್ಯೆ ಲೀಲಾ ರಾಘವನ್ ಅವರ ಸಲಹೆ ಮೇರೆಗೆ ಸೀಟಿಸ್ಕ್ಯಾನ್, ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳನ್ನು ನಡೆಸಲಾಯಿತು.