ಮುರುಘಾ ಶರಣರ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

ದಾವಣಗೆರೆ.ಸೆ.೩: ಪೋಕ್ಸೋ, ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ಬಂಧಿತ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಸಹಚರರ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವ ಜೊತೆಗೆ ಮುರುಘಾ ಮಠವನ್ನು ಸೂಪರ್ ಸೀಡ್ ಮಾಡುವುದೂ ಸೇರಿದಂತೆ ಇತರೆ ಹಕ್ಕೊತ್ತಾಯಿಸಿ ಪ್ರಗತಿಪರ ಸಂಘಟನೆಗಳ ಜಿಲ್ಲಾ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಮುದಾಯದ ಜನರು, ಮಹಿಳೆಯರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ  ಮನವಿ ಸಲ್ಲಿಸಿ ಎಸಿ ಮುಖೇನಾ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಮುರುಘಾ ಮಠದ ವಿದ್ಯಾರ್ಥಿ ನಿಲಯದ ಬಾಲಕಿಯರ ಮುಂದಿನ ಶಿಕ್ಷಣದ ಹೊಣೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡು, ಆ ಮಕ್ಕಳ ವಿದ್ಯಾಭ್ಯಾಸ ಮುಗಿದ ನಂತರ ಸರ್ಕಾರಿ ನೌಕರಿಯನ್ನು ನೀಡಬೇಕು. ಸಂತ್ರಸ್ಥ ಹೆಣ್ಣು ಮಕ್ಕಳಿಗೆ ತಲಾ 1 ಕೋಟಿ ರು. ಪರಿಹಾರ ನೀಡಬೇಕು. ನಾಡಿನ ಎಲ್ಲಾ ಮಠ, ಧಾರ್ಮಿಕ ಸಂಸ್ಥೆಗಳ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಚಿತ್ರದುರ್ಗದ ಮುರುಘಾ ಮಠವನ್ನು ತಕ್ಷಣವೇ ಸೂಪರ್‍ಸೀಡ್ ಮಾಡಿ, ಸರ್ಕಾರದ ವಶಕ್ಕೆ ಪಡೆಯಬೇಕು. ಮರುಘಾ ಶರಣರ ವಿರುದ್ಧ ಕೇಸ್ ದಾಖಲಾಗುವಲ್ಲಿ ಸಾಕಷ್ಟು ಶ್ರಮಿಸಿದ ಮೈಸೂರಿನ ಒಡನಾಡಿ ಸಂಸ್ಥೆಯವರರಿಗೆ ಜೀವ ಬೆದರಿಕೆ ಇದ್ದು, ಆ ಸಂಸ್ಥೆಯವರಿಗೆ ಸೂಕ್ತ ರಕ್ಷಣೆ ಭದ್ರತೆಯನ್ನು ಒದಗಿಸಬೇಕು. ಶ್ರೀಮಠದಲ್ಲಿ ಬಡ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಆಗಿರುವ ದೌರ್ಜನ್ಯ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಬಂಧನವಾಗುತ್ತಿದ್ದಂತೆಯೇ ಶರಣರಿಗೆ ಅನಾರೋಗ್ಯದ ಹೆಸರಿನಲ್ಲಿ ರಕ್ಷಣೆ ಮಾಡಲು ಹೊರಟಿರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.ವಿಚಾರವಾದಿ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಮುರುಘಾ ಮಠದ ವಿದ್ಯಾರ್ಥಿ ನಿಲಯದ ಇಬ್ಬರು ಅಪ್ರಾಪ್ತೆಯರು ತಮ್ಮ ಮೇಲೆ ನಿರಂತವಾಗಿ ಮಠದ ಮುಖ್ಯಸ್ಥ ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಮಾಡಿದ್ದನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು. ಸಂತ್ರಸ್ಥ ಮಕ್ಕಳಲ್ಲಿ ಓರ್ವ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದ್ದು, ಶರಣರ ಮೇಲೆ ಅಸ್ಪೃಶ್ಯತನಾ ನಿಷೇಧ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಈ ಪ್ರಕರಣವು ಪಾರದರ್ಶಕವಾಗಿ ನಡೆಯಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ತಾಕೀತು ಮಾಡಿದರು.ಪ್ರತಿಭಟನೆಯಲ್ಲಿ ಗುಮ್ಮನೂರು ಮಲ್ಲಿಕಾರ್ಜುನ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಕಾರ್ಮಿಕ ಮುಖಂಡರಾದ ಶ್ರೀನಿವಾಸ, ಆನಂದರಾಜ, ಬೀಡಿ ಕಾರ್ಮಿಕರ ಸಂಘಟನೆಯ ಜಮೀನಾ ಖಾನಂ, ಕರಿಬಸಪ್ಪ, ದಲಿತ ಮುಖಂಡರಾದ ಎಚ್.ಮಲ್ಲೇಶ್, ಶ್ರೀನಿವಾಸ, ಕೆಟಿಜೆ ನಗರ ಬಿ.ದುಗ್ಗಪ್ಪ, ಎಸ್.ಜಯಪ್ಪ, ಆಟೋ ತಿಮ್ಮಣ್ಣ, ಗುಮ್ಮನೂರು ರಾಮಚಂದ್ರಪ್ಪ, ಇಪ್ಟಾದ ಐರಣಿ ಚಂದ್ರು, ಸ್ಲಂ ಜನಾಂದೋಲನದ ರೇಣುಕಾ ಯಲ್ಲಮ್ಮ, ಟಿ.ರವಿ ಕೆಟಿಜೆ ನಗರ, ಎಲ್.ಜಯಪ್ಪ, ಅಳಗವಾಡಿ ನಿಂಗರಾಜ, ಮೇಗಳಗೆರೆ ನಾಗಪ್ಳ ಮಂಜುನಾಥ, ಅಳಗವಾಡಿ ಬಾಬು ಇತರರಿದ್ದರು.

Attachments area