ಮುರುಘಾ ಮಠ ಜ್ಞಾನಾರ್ಜನೆಯ ತಾಣ; ಸಂಸದ ಜಿ.ಎಂ ಸಿದ್ದೇಶ್ವರ್

 

ದಾವಣಗೆರೆ.ಜು.೧೪:  ಚಿತ್ರದುರ್ಗದ ಮುರುಘಾ ಮಠ ಜ್ಞಾನಾರ್ಜನೆ, ಅನ್ನದಾಸೋಹ ನೀಡುತ್ತಿರುವ ಮಹಾನ್ ಮಠ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಬಣ್ಣಿಸಿದರು.ನಗರದ ಶಿವಯೋಗಾಶ್ರಮದಲ್ಲಿ ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳ ೬೫ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ  ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಚಿತ್ರದುರ್ಗದ ಮುರುಘಾ ಮಠ ಲಕ್ಷಾಂತರ ಜನರಿಗೆ ವಿದ್ಯೆ ಮತ್ತು ಪ್ರಸಾದ ನೀಡಿತ್ತಿದೆ. ಹಿಂದೆ ಯಾರಾದರೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯಬೇಕು ಎಂದರೆ ಮುರುಘಾ ಮಠದಲ್ಲಿ ಸೇರಬೇಕು ಎಂಬ ಮಾತಿತ್ತು. ಈಗಲೂ ಅದನ್ನೂ ಕಾಣಬಹುದು ಎಂದು ತಿಳಿಸಿದರು.ಡಾ. ಶಿವಮೂರ್ತಿ ಮುರುಘಾ ಶರಣರು ಅಧಿಕಾರಕ್ಕೆ ಬಂದ ನಂತರ ಚಿತ್ರದುರ್ಗದ ಬೃಹನ್ಮಠದ ಕೀರ್ತಿಯನ್ನು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಅತೀ ಎತ್ತರದ ಬಸವಣ್ಣನ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ.‌ ಇನ್ನೂ ಕೆಲವೇ ದಿನಗಳಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತೋಷ ಎಂದು ತಿಳಿಸಿದರು.ದಾವಣಗೆರೆ ಅನೇಕ ಇತಿಹಾಸದ ಮೂಲ ತಾಣ. ಹರ್ಡೇಕರ್ ಮಂಜಪ್ಪ ಮತ್ತು ಮೃತ್ಯುಂಜಯ ಅಪ್ಪನವರು ಒಡಗೂಡಿ ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ದಾವಣಗೆರೆಯಲ್ಲಿ ಸಾರ್ವಜನಿಕ ಬಸವ ಜಯಂತಿ ಪ್ರಾರಂಭಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಮೂಲ ಈ ದಾವಣಗೆರೆ ಎಂದು ತಿಳಿಸಿದರು.ಅಥಣಿ ಶಿವಯೋಗಿಗಳು ಕಾವಿ ಧರಿಸಿದರೂ ಮಠಾಧಿಪತಿ ಆಗಲಿಲ್ಲ. ಶಿವಯೋಗದ ಮೂಲಕ ಜನರ ಸನ್ಮಾರ್ಗ ದಲ್ಲಿ ಕೊಂಡೊಯ್ದವರು. ಅಥಣಿ ಶಿವಯೋಗಿಗಳು ಎಲ್ಲಿ ಹೂವುಗಳಿಗೆ ನೋವಾಗುತ್ತದೆ ಎಂದು ಎಂದೆಂದಿಗೂ ಹೂವು ಕಿತ್ತವರಲ್ಲ. ನೆಲಕ್ಕೆ ಬಿದ್ದಂತಹ ಹೂಗಳನ್ನು ಪೂಜೆಗೆ ಬಳಸುತ್ತಿದ್ದರು. ಅಂತಹ ಮಹಾನ್ ಶಿವಯೋಗಿಗಳು ಎಂದು ಸ್ಮರಿಸಿದರು.ಡಾ. ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ದಿವ್ಯಪಥ ಲೋಕಹಿತ… ಗ್ರಂಥ ಅಥಣಿ ಶಿವಯೋಗಿಗಳ ಜೀವನದ 86 ಘಟ್ಟಗಳಿವೆ. ಎಲ್ಲರೂ ಕೈ ತೊಳೆದು ಮುಟ್ಟುವಂತಹ ಅತ್ಯುತ್ತಮ ಕೃತಿ ಹೊರ ತಂದಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಮಾತನಾಡಿ, ಡಾ.ಶಿವಮೂರ್ತಿ  ಮುರುಘಾ ಶರಣರು ರಚಿಸಿರುವ ದಿವ್ಯಪಥ ಲೋಕಹಿತ.. ಗ್ರಂಥ ಲೋಕಾರ್ಪಣೆ ಗೊಳಿಸುವ ಅವಕಾಶ ನೀಡಿರುವುದು ಹೆಮ್ಮೆಯ ವಿಚಾರ. ಗುರು ಸ್ಥಾನ ಅತ್ಯಂತ ಪವಿತ್ರ ಮತ್ತು ಮಹತ್ತರ. ಅಂತಹವರ ಸಾಲಿನಲ್ಲಿ ಜಯದೇವ ಮುರುಘಾ ಸ್ವಾಮೀಜಿ ಕಂಡು ಬರುತ್ತಾರೆ.‌ ಸಮಾಜದ ಶ್ರೇಯೋಭಿವೃದ್ದಿ ಜೊತೆಗೆ ಇತರೆ ಸಮಾಜದವರಿಗೂ ಸಮಾನವಾಗಿ ನೋಡಿದವರು. ಮಸೀದಿಯನ್ನು ಕಟ್ಟಲು ಜಾಗ ನೀಡಿದವರು. ಚಿತ್ರದುರ್ಗದ ಬೃಹನ್ಮಠ ಧಾರ್ಮಿಕ ಕ್ಷೇತ್ರದಲ್ಲಿ ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಅವಿಚ್ಛಿನ್ನ ಕಾಣಿಕೆ ನೀಡಿದೆ. ಡಾ. ಶಿವಮೂರ್ತಿ ಮುರುಘಾ ಶರಣರು ಬಸವಣ್ಣ ನವರ ತತ್ವಾದರ್ಶಗಳ ಪಾಲಿಸಿಕೊಂಡು ಹೋಗುತ್ತಿದ್ದಾರೆ. ಶರಣರ ಎಲ್ಲಾ ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು. ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷತೆ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಶಾಸಕ ಎಸ್.ಎ. ರವೀಂದ್ರನಾಥ್,ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ,  ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಮೇಯರ್ ಜಯಮ್ಮ ಗೋಪಿನಾಯ್ಕ ಇತರರು ಇದ್ದರು. ಎಚ್.ಎಸ್. ಮಂಜುನಾಥ್ ಸ್ವಾಮಿ ಸ್ವಾಗತಿಸಿದರು

Attachments area

ReplyForward