ಮುರುಘಾ ಮಠದಲ್ಲಿ ಶ್ರೀಗಳ ಕರೆತಂದು ಮಹಜರು

ಚಿತ್ರದುರ್ಗ,ಸೆ.೪-ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಮುರುಘಾ ಮಠಕ್ಕೆ ಕರೆತಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಶ್ರೀಗಳನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ ಪೊಲೀಸರು ಇಂದು ಬೆಳಿಗ್ಗೆ ನಗರದ ಮುರುಘಾ ಮಠಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆತಂದು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿದರು.
ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಚಿತ್ರದುರ್ಗದ ಗ್ರಾಮಾಂತರ ಪೊಲೀಸರು ಮುರುಘಾ ಶ್ರೀಗಳನ್ನು ಪೊಲೀಸ್ ವಾಹನದಲ್ಲಿ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ.
ಕಳೆದ ೯ ದಿನಗಳ ಹಿಂದೆ ಪೋಕ್ಸೋ ಪ್ರಕರಣ ದಾಖಲಾಗಿ ಇದೀಗ ಬಂಧಿಯಾಗಿರುವ ಡಾ.ಮುರುಘಾ ಶರಣರನ್ನು ಡಿವೈಎಸ್ ಪಿ ಕಚೇರಿಯಲ್ಲಿ ಇಡಲಾಗಿದ್ದು, ಬೆಳಗ್ಗೆ ಎದ್ದ ಬಳಿಕಾ ದೋಸೆ ಹಾಗೂ ಹಣ್ಣುಗಳನ್ನು ಸೇವನೆ ಮಾಡಿದ್ದಾರೆ. ನಂತರ ಶ್ರೀಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆಯು ಸಹ ಶ್ರೀಗಳು ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡದೆ ತಡಬಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಡಾ.ಮುರುಘಾ ಶರಣರನ್ನು ಮಠಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ ಹಾಗೂ ತನಿಖಾಧಿಕಾರಿ ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಸ್ಥಳ ಮಹಜರ್ ಗೆ ಶ್ರೀಗಳನ್ನು ಕರೆತಂದಿದ್ದು, ಈ ವೇಳೆ ಮುರುಘಾ ಶ್ರೀಗಳ ವಾಸ್ತವ್ಯದ ಕೊಠಡಿ, ದರ್ಬಾರ್ ಹಾಲ್, ಹಾಗೂ ಶ್ರೀಗಳು ಕೂರುವ ಕೊಠಡಿಯಲ್ಲಿ ಮಹಜರ್ ನಡೆಸಿದ್ದಾರೆ.
ಸಂತ್ರಸ್ಥರು ಬಾಲಕಿಯರು ಬರುವುದಕ್ಕೆ ಸ್ವಾಮೀಜಿ ಓಡಾಡುತ್ತಿದ್ದ ಸ್ಕೈ ವಾಕ್ ಬಳಕೆ ಮಾಡುತ್ತಿದ್ದು, ಸ್ಕೈವಾಕ್ ಮೂಲಕವೇ ರಾತ್ರಿ ವೇಳೆ ಬಾಲಕಿಯರು ಸಂಚರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಮ ಪ್ರಭು ಸಂಶೋಧನಾ ಕೇಂದ್ರ ಅನುಭವ ಮಂಟಪ ಅವರ ಕಚೇರಿ , ಗದ್ದುಗೆ ಗೆ ಸ್ಕೈವಾಕ್ ನಲ್ಲಿ ಓಡಾಡುತ್ತಿದ್ದ ಸ್ವಾಮೀಜಿ ಮಠದ ಪೂರ್ಣ ಆವರಣದಲ್ಲಿ ಓಡಾಡುವುದಕ್ಕೆ ಸ್ಕೈವಾಕ್ ಬಳಸುತ್ತಿದ್ದರು.
ಮಠದಲ್ಲಿ ಹೆಚ್ಚಿನ ಸೆಕ್ಯುರಿಟಿ ಗಾರ್ಡ್ಸ್, ಸಿಸಿಟಿವಿ ಕ್ಯಾಮರಾ ಇದ್ದರು ಕೂಡ ಇದೇ ಸ್ಕೈ ವಾಕ್ ಮೇಲೆಯೇ ಬಾಲಕಿಯರು ಬಂದು ಹೋಗುತ್ತಿದ್ದು, ಗೌಪ್ಯವಾಗಿಯೇ ಈ ಕೃತ್ಯ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದ್ದು, ಈ ಸ್ಕೈವಾಕ್ ವೇನೆ ಬಾಲಕಿಯ ಲೈಂಗಿಕ ದೌರ್ಜನ್ಯಕ್ಕೆ ಪೂರಕವಾಯಿತಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.
ಈ ನಡುವೆ ಅಜ್ಞಾತ ಸ್ಥಳದಲ್ಲಿ ಶ್ರೀಗಳನ್ನು ವಿಚಾರಣೆ ನಡೆಸಿ ಪೊಲೀಸರು ಪ್ರಕರಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಪೊಲೀಸ್ ವಶಕ್ಕೆ ಪಡೆದ ಮೂರನೇ ದಿನವಾದ ಇಂದು ಕೂಡ ಮುರುಘಾ ಸ್ವಾಮೀಜಿಗಳಿಗೆ ಪೊಲೀಸರು ಡ್ರಿಲ್ ಮಾಡಿದ್ದಾರೆ.
ಎಸ್.ಪಿ ಪರಶುರಾಮ್ ಹಾಗೂ ಡಿವೈಎಸ್ಪಿ ಅನಿಲ್‌ರಿಂದ ಶ್ರೀಗಳ ವಿಚಾರಣೆ ನಡೆಸಲಾಗಿದ್ದು, ಬಾಲಕಿಯರ ೧೬೪ ಹೇಳಿಕೆ ಹಾಗೂ ವಾರ್ಡ್ ನ್ ಹೇಳಿಕೆ ಆಧರಿಸಿ ಪ್ರಶ್ನೆ ಕೇಳಿ ಹೇಳಿಕೆಯನ್ನು ದಾಖಲಿಸ ತೊಡಗಿದ್ದಾರೆ. ಇಂದು ಜಾತಿನಿಂದನೆ ಕೇಸ್ ವಿಚಾರಣೆ ಮಾಡಲಿರುವ ಪೊಲೀಸರು, ಪೊಲೀಸರ ಪ್ರಶ್ನೆಗೆ ಯೋಚನೆ ಮಾಡುತ್ತಲೇ ಸ್ವಾಮೀಜಿ ಉತ್ತರ ನೀಡುತ್ತಿದ್ದಾರೆ. ತನ್ನದೇನು ತಪ್ಪಿಲ್ಲ, ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಬಹುತೇಕ ಉತ್ತರಗಳನ್ನು ನೀಡಲಾಗುತ್ತಿದೆ. ತಾಂತ್ರಿಕ ಸಾಕ್ಷಾಧಾರಗಳನ್ನು ಕಲೆಹಾಕಲು ಪೊಲೀಸರು ಮುಂದಾಗಿದ್ದು, ಇದರ ಜೊತೆಗೆ ಬಯೋಲಾಜಿಕಲ್ ಎವಿಡೆನ್ಸ್ ಸಹ ಕಲೆಹಾಕಲು ಖಾಕಿ ಮುಂದಾಗಿದೆ.
ಈಗಾಗಲೇ ಮಠದಲ್ಲಿ ಬಾಲಕಿಯರನ್ನು ಕರೆದೊಯ್ದ ಮಹಜರು ಮಾಡಲಾಗಿದ್ದು ಶ್ರೀಗಳ ಮಹಜರು ಪ್ರಕ್ರಿಯೆ ಮುಗಿದರೆ ಬಹುತೇಕ ತನಿಖೆ ಮುಕ್ತಾಯ ಆಗಬಹುದು. ನಾಳೆ ಕೋರ್ಟ್?ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಬಹುತೇಕ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈಗಾಗಲೇ ಜಾಮೀನು ಕೋರಿ ಶರಣರ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಸ್ಟಡಿ ಮುಗಿದ ಬಳಿಕ ಅರ್ಜಿ ವಿಚಾರಣೆ ಸಾಧ್ಯತೆ ಎನ್ನಲಾಗುತ್ತಿದೆ. ವೈದ್ಯಕೀಯ ಅಂಶಗಳ ಆಧಾರದ ಮೇಲೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ನಾಳೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ.
ಮುರುಘಾಶ್ರೀ ವಜಾ:
ಈ ನಡುವೆ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಪೊಲೀಸ್ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ಅವರನ್ನು ವಜಾ ಮಾಡಲಾಗಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾಗಿದ್ದ ಶ್ರೀಗಳು, ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿಯಿಂದ ಸ್ವಾಮೀಜಿಯನ್ನು ವಜಾ ಮಾಡಲಾಗಿದೆ. ವಿಶ್ವಸ್ತ ಸಮಿತಿ ಸದಸ್ಯತ್ವದಿಂದಲೂ ಮುರುಘಾಶ್ರೀ ಅಮಾನತು ಮಾಡಿದ್ದು, ಗೌರವ ಕಾರ್ಯದರ್ಶಿ ಪ್ರೊ.ಕೆ.ಇ.ರಾಧಾಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂವರಿಗೆ ಶೋಧ:
ಪ್ರಕರಣ ಸಂಬಂಧ ನಾಪತ್ತೆಯಾದ ಪರಮಶಿವಯ್ಯ, ಗಂಗಾಧರಯ್ಯ ಮತ್ತು ಓರ್ವ ಬಾಲಾಪರಾಧಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ವಾಮೀಜಿ ಬಂಧನ ಆಗುವವರೆಗೂ ಮಠದಲ್ಲಿದ್ದ ಮೂವರು, ಮುರುಘಾಶ್ರೀಗಳು ಅರೆಸ್ಟ್ ಆದ ನಂತರ ಭಯದಿಂದ ನಾಪತ್ತೆಯಾಗಿದೆ. ಮೂವರು ಆರೋಪಿಗಳ ಮನೆಗೆ ಪೊಲೀಸರು ನೋಟಿಸ್? ಅಂಟಿಸಿದ್ದಾರೆ. ತಕ್ಷಣವೇ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಆರೋಪಿಗಳ ಪತ್ತೆಗೆ ಎಸ್??ಪಿ ಪರಶುರಾಮ್ ತಂಡ ರಚಿಸಿದ್ದಾರೆ. ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.