ಮುರುಘಾಶ್ರೀಗಳಿಂದ ರಾಜ್ಯೋತ್ಸವ ಆಚರಣೆ

ಚಿತ್ರದುರ್ಗ, ನ. ೨– ೨೦೨೧ನೆ ಸಾಲಿನ ಶರಣಸಂಸ್ಕೃತಿ ಉತ್ಸವವು ಯಶಸ್ವಿಯಾಗಿ ಜರುಗಿ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಮಾಧ್ಯಮದವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಶ್ರೀಮುರುಘಾಮಠವು ಸದಾ ಜಾಗೃತ ಸ್ಥಾನದಲ್ಲಿದೆ. ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಎಲ್ಲ ಧರ್ಮ, ಜನಾಂಗದವರು ಶ್ರೀಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ನಿಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬಂದಾಗ ಜಿಲ್ಲೆಯ ಅಭಿವೃದ್ಧಿಗಾಗಿ ಕೈಗಾರಿಕೆಗಳ ಕಾರಿಡಾರ್ ಮಾಡಬೇಕೆಂದು ಕೇಳಿದೆವು. ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿರುವುದು ಸಂತಸ ತಂದಿದೆ ಎಂದರು.ಡಾ. ಶಿವಮೂರ್ತಿ ಮುರುಘಾ ಶರಣರು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದ ವಚನ ಸಂಸ್ಕೃತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ ಮಹಾಪ್ರಬಂಧಕ್ಕೆ ದಿ. ೩೦-೧೦-೨೦೨೧ರಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಮೌಖಿಕ ಪರೀಕ್ಷೆಯಲ್ಲಿ ಕುಲಪತಿಗಳಾದ ಪ್ರೊ. ಸ.ಚಿ. ರಮೇಶ ಹಾಗು ಸಂದರ್ಶಕರಾದ ಪ್ರೊ. ಶಿವಾನಂದ ವಿರಕ್ತಮಠ, ಕನ್ನಡ ಅಧ್ಯಯನಾಂಗದ ನಿರ್ದೇಶಕರಾದ ಪ್ರೊ. ಮಹದೇವಯ್ಯ, ಪ್ರೊ. ವೀರೇಶ ಬಡಿಗೇರ, ಪ್ರೊ. ಕೆ. ರವೀಂದ್ರನಾಥ್ ಅವರನ್ನೊಳಗೊಂಡ ಸಮಿತಿಯು ಕುಲಂಕಷವಾಗಿ ಪರಿಶೀಲಿಸಿ ಡಿ.ಲಿಟ್ ಪದವಿಗೆ ಅರ್ಹರಿದ್ದಾರೆಂದು ಅಧಿಸೂಚನೆಯನ್ನು ಹೊರಡಿಸಿತು.ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕೆಇಬಿ ಷಣ್ಮುಖಪ್ಪ ಹಾಗು ಚಂದನವಾಹಿನಿಯ ರವಿಕುಮಾರ್ ಇವರನ್ನು ಶ್ರೀಗಳು ಗೌರವಿಸಿದರು.ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಕೆ.ವಿ.ಪ್ರಭಾಕರ್, ಹನುಮಲಿ ಷಣ್ಮುಖಪ್ಪ, ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ. ಪರಮಶಿವಯ್ಯ ಉಪಸ್ಥಿತರಿದ್ದರು.