ಮುರುಘಾಮಠದಲ್ಲಿ ಸಾಮೂಹಿಕ ವಿವಾಹಮಹೋತ್ಸವ


ಚಿತ್ರದುರ್ಗ, ನ. 6; ಅನ್ನ ನೀಡುವ ಕಾರ್ಯ ಎಲ್ಲಿ ನಡೆಯುತ್ತದೆಯೋ ಅಲ್ಲಿ ಪುಣ್ಯ ಇರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತೊಂದನೇ ವರ್ಷ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ, ಅವಿರಳಜ್ಞಾನಿ ಚೆನ್ನಬಸವಣ್ಣನವರ ಸ್ಮರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಶ್ರೀಗಳು ಮಾತನಾಡಿದರು.ಮುರುಘಾಮಠದಲ್ಲಿ ಪ್ರತಿತಿಂಗಳು ಐದನೇ ತಾರೀಕು ವಿವಾಹದ ಹಬ್ಬ. ಮೊದಲು ದೀಪದ ಆವಳಿ ಇತ್ತು, ಇಂದು ದೀಪಾವಳಿ ಹಬ್ಬದಂದು ಪಟಾಕಿಗಳ ಆವಳಿ. ಆದರೆ ಹಸಿರು ಪಟಾಕಿಗಳಿಗೆ ನ್ಯಾಯಾಲಯ ತೀರ್ಪು ನೀಡಿದೆ. ಈ ಹಬ್ಬದ ವೈವಿಧ್ಯತೆ ದೀಪ. ಅಲ್ಲಿ ಜ್ಯೋತಿ ಇರುತ್ತದೆ. ಜ್ಯೋತಿ ಎಂದರೆ ಪ್ರಕಾಶ. ಮಾನವನ ಬದುಕು ಪ್ರಣತೆ ಇದ್ದ ಹಾಗೆ ಎಂದರು. ಇಂದು ಜಾತೀಯತೆ ಹೆಚ್ಚಾಗುತ್ತಿದೆ. ಜಾತ್ಯತೀತ ಮನೋಭಾವ ಬೆಳೆಯಬೇಕು. ಜಾತಿಯ ಜ್ಯೋತಿಯಾಗದೆ ಧರ್ಮಜ್ಯೋತಿಯಾಗಬೇಕು. ಜಾತಿಯ ಜ್ಯೋತಿ ಸೀಮಿತ; ಧರ್ಮದ ಜ್ಯೋತಿ ವಿಶಾಲವಾದುದು.  ಧರ್ಮಜ್ಯೋತಿ ಆಚೆಗೆ ವಿಶ್ವಜ್ಯೋತಿ. ನಾವೆಲ್ಲ ವಿಶ್ವಮಾನವೀಯತೆಯ ಕಡೆ ಸಾಗಬೇಕು. ಆಗ ಮಾತ್ರ ಜಾತಿಜಾತಿಗಳ ಮಧ್ಯೆ ಜಗಳಗಳಾಗುವುದಿಲ್ಲ. ಸಮಾಜದಲ್ಲಿ, ಸಂಸಾರದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಗುತ್ತವೆ. ಹಾಗಾಗಿ ಸಂಸಾರದಲ್ಲಿ ಆದರ್ಶ ಉಂಟಾಗಬೇಕು. ವಧು, ವರದಕ್ಷಿಣೆ ಎಂಬ ಮಾರಾಟಕ್ಕೆ ಒಳಗಾಗಬಾರದು. ನಾನು ಸ್ವತಃ ದುಡಿದು ಬದುಕಬೇಕು. ವರದಕ್ಷಿಣೆ ಕಿರುಕುಳ ಕೊಡಬೇಡಿ. ಕಾಯಕ ಮಾಡಿ ಬದುಕಿ. ವಿಶ್ವಮಾನವ ಆಲೋಚನೆ ಬರಬೇಕು. ಚನ್ನಬಸವಣ್ಣನವರ ಜ್ಞಾನ ಇಂದು ಎಲ್ಲರಿಗೂ ಸಿಗುವಂತಾಗಲಿ ಎಂದು ನುಡಿದರು.ಮುಖ್ಯಅತಿಥಿ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಹೆಚ್. ಗುಡ್ಡದೇಶ್ವರಪ್ಪ ಮಾತನಾಡಿ, ಸಮಸಮಾಜದ ನಿರ್ಮಾಣಕ್ಕೆ ಬಸವಣ್ಣನವರ ಕೊಡುಗೆ ಅಪಾರ. ನಾವು ನಿಸರ್ಗದ ಕೂಸುಗಳು. ೧೨ನೇ ಶತಮಾನದ ದಾರ್ಶನಿಕರ ತತ್ವಾದರ್ಶಗಳನ್ನು ಇಂದು ಮುರುಘಾಮಠವು ಯಥಾವತ್ತಾಗಿ ಪಾಲಿಸುತ್ತಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ. ಕಳೆದ ೩೧ವರ್ಷಗಳಿಂದ ಶ್ರೀಗಳು ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಇದೊಂದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.ಮಂಜುನಾಥ್ ನಾಯಕ್ ಮಾತನಾಡಿ, ಜೀವನದಲ್ಲಿ ಸೋತು ಸುಸ್ತಾಗಿ ಏನೂ ಆಗುವುದಿಲ್ಲ ಎನ್ನುವವರಿಗೆ ನನ್ನ ಪುಸ್ತಕ ಒಂದು ಸ್ಫೂರ್ತಿ. ಸಂಸಾರದಲ್ಲಿ ಸಾಮರಸ್ಯದ ಬಗ್ಗೆ ನನ್ನ ಕೃತಿ ಹೇಳುತ್ತದೆ. ಒಂದೊಂದು ಕಥೆಗಳು ಒಂದೊಂದು ಬದುಕಿನ ರೀತಿಯನ್ನು ವ್ಯಕ್ತಪಡಿಸುತ್ತವೆ. ೧೨ನೇ ಶತಮಾನದ ಅನುಭವ ಮಂಟಪಕ್ಕೆ ಇಂದು ಮುರುಘಾಮಠದಲ್ಲಿ ನಿರ್ಮಾಣವಾಗಿರುವ ಅನುಭವ ಮಂಟಪ ಹೋಲುತ್ತದೆ ಎಂದರು.ಜಿ.ಪA. ಮಾಜಿ ಸದಸ್ಯ ರಾಜಾನಾಯ್ಕ ವೇದಿಕೆಯಲ್ಲಿದ್ದರು.ಈ ಸಂದರ್ಭದಲ್ಲಿ ಎರಡು ಅಂತರ್ಜಾತಿ ವಿವಾಹ ಸೇರಿದಂತೆ ಒಟ್ಟು ೧೩ ಜೋಡಿಗಳ ವಿವಾಹ ನೆರವೇರಿತು. ಅವಿರಳಜ್ಞಾನಿ ಚನ್ನಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಮತ್ತು  ಕೆ. ಮಂಜುನಾಥ ನಾಯಕ್ ಬರೆದಿರುವ ಬಾಳಿಗೊಂದು ಬಂಗಾರದ ಮಾತು ಕೃತಿ ಲೋಕಾರ್ಪಣೆಗೊಳಿಸಲಾಯಿತು.ಹರಿವೃಕ್ಷಾಮೃತ ದೇವರು ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.