ಮುರಳೀಧರನ್‌ಗೆ ಆರಂಭದಲ್ಲೇ ವಿಘ್ನ

ಬೆಂಗಳೂರು,ಆ.೧೭-ಶ್ರೀಲಂಕಾದ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರು ಧಾರವಾಡದಲ್ಲಿ ತಂಪು ಪಾನೀಯ ಕಂಪನಿ ಆರಂಭಿಸಲು ೯೦೦ ಕೋಟಿ ಬಂಡವಾಳ ಹೂಡಿದ್ದು, ಅವರಿಗೆ ಆರಂಭಿಕ ಹಿನ್ನಡೆ ಉಂಟಾಗಿದೆ .
ಧಾರವಾಡದಲ್ಲಿ ತಂಪು ಪಾನೀಯ ಕಂಪನಿ ಸ್ಥಾಪನೆಗೆ ಪರಿಸರವಾದಿ, ನಟ ಸುರೇಶ ಹೆಬ್ಳೀಕರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮುತ್ತಯ್ಯ ಮುರಳೀಧರನ್‌ಗೆ ಕಂಪನಿಯನ್ನು ಪ್ರಾರಂಭಿಸಲು ಧಾರವಾಡ ಸಮೀಪದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರವು ಭೂಮಿಯನ್ನು ಒದಗಿಸಿದೆ. ಈಗಾಗಲೇ ೨೦೦ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ.
ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈ ಕಂಪನಿ ಆರಂಭವಾದರೆ ನಿತ್ಯ ೨೦ ಲಕ್ಷ ಲೀಟರ್ ನೀರು ಪೂರೈಕೆಯಾಗಬೇಕು. ಕಂಪನಿಗೆ ಇಷ್ಟು ಪ್ರಮಾಣದಲ್ಲಿ ನೀರು ಪೂರೈಸಿದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರಲಿದೆ ಎಂಬುದು ಸುರೇಶ ಹೆಬ್ಳೀಕರ್ ಅವರ ಅಭಿಪ್ರಾಯ.
ಇನ್ನು ಈ ಬಗ್ಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಮುತ್ತಯ್ಯ ಮುರಳೀಧರನ್ ಅವರು ಧಾರವಾಡದಲ್ಲಿ ಕಂಪನಿ ಆರಂಭಿಸಲಿದ್ದಾರೆ ಎಂದು ಗೊತ್ತಾಗಿದೆ. ಹೊಸ ಕಂಪನಿ ಆರಂಭದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಕಂಪನಿಯ ಪ್ರಾರಂಭಕ್ಕೆ ವಿರೋಧದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಂತೋಷ್ ಲಾಡ್ ತಿಳಿಸಿದರು.
ಮುರಳೀಧರನ್ ಕೂಡ ೪೦೦ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಸ್ಥಳೀಯವಾಗಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ.
೭-೮ ತಿಂಗಳುಗಳಲ್ಲಿ ವ್ಯವಹಾರ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಕೆಲಸವನ್ನು ತೀವ್ರವಾಗಿ ನಡೆಸಲಾಗಿದೆ ಮತ್ತು ಮುತ್ತಯ್ಯ ಪಾನೀಯ ಮತ್ತು ಮಿಠಾಯಿ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಲಾಗುವುದು.