ಮುರಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ ಆಡಳಿತ ಮಂಡಳಿ ಸದಸ್ಯರ ಆಸ್ತಿ ಮುಟ್ಟುಗೋಲು ಮಾಡುವಂತೆ ಆಗ್ರಹ

ವಿಜಯಪುರ, ಡಿ.29-ಮುರಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಆಡಳಿತ ಮಂಡಳಿ ಸದಸ್ಯರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗು ಗ್ರಾಹಕರ ಹಣ ಹಿಂದಿರುಗಿಸಲು ಸಕ್ಷಮ ಪ್ರಾಧಿಕಾರ ನೇಮಕ ಮಾಡಿ ಆದೇಶ ಮಾಡುವಂತೆ ಆಗ್ರಹಿಸಿ ಗ್ರಾಹಕರು ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯಿಂದ ಪ್ರತಿಭಟನೆ ಹಮ್ಮಿಕೊಂಡು ವಿಜಯಪುರ ಜಿಲ್ಲಾದಿಕಾರಿಗಳ ಮೂಲಕ ಸಹಕಾರ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಧರಣಿ ನೇತೃತ್ವ ವಹಿಸಿರುವ ರೈತ ಮುಖಂಡರಾದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುರಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿಯವರ ಹೆಸರು ನೋಡಿ ಜನರು ಕೋಟ್ಯಾಂತರ ರೂಪಾಯಿಗಳನ್ನು ಠೇವಣಿ ಮಾಡಿದ್ದಾರೆ. ಅವಧಿ ಮುಗಿದರೂ ಸಹ ಗ್ರಾಹಕರಿಗೆ ಬರಬೇಕಾದ ಹಣ ಕೊಡುತ್ತಿಲ್ಲ. ಈ ರೀತಿಯಾಗಿ ಸುಮಾರು 39 ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿದ್ದು, 18 ತಿಂಗಳು ಗತಿಸಿದರೂ ಹಣ ಮರುಪಾವತಿ ಮಾಡುವಂತೆ ಮುರಗೇಶ ನಿರಾಣಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಹಕರಿಗೆ ಹಣ ಮರುಪಾವತಿ ಮಾಡುವಂತೆ ಕಳೆದ ಒಂದು ತಿಂಗಳಿನಿಂದಲು ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರೂ ಸಹ ಇಲಾಖೆಯವರು ಹಾಗೂ ಜಿಲ್ಲಾಡಳಿತವು ಗ್ರಾಹಕರ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ಆರೋಪಿಸಿದರು.
ಸದರಿ ಸಹಕಾರಿ ನಿಯಮಿತದಲ್ಲಿ ಬಡ ಕೂಲಿಕಾರ್ಮಿಕರು, ರೈತರು, ವ್ಯಾಪಾರಸ್ಥರು, ಮಹಿಳೆಯರು, ಮಾಜಿ ಸೈನಿಕರು ಸಣ್ಣ ಪುಟ್ಟ ಬೀದಿ ವ್ಯಾಪಾರಸ್ಥರು, ನಿವೃತ್ತ ನೌಕರರು ಇದರಲ್ಲಿ ಹಣ ತೊಡಗಿಸಿದ್ದಾರೆ. ಈ ರೀತಿಯಾಗಿ ಹಗಲಿರುಳು ದುಡಿದ ಕೂಡಿಟ್ಟ ಹಣವನ್ನು ಕಳೆದುಕೊಂಡಿರುವ ಗ್ರಾಹಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಇದರಲ್ಲಿ ಕೆಲವೊಬ್ಬರು ಹಣ ಕಳೆದುಕೊಂಡ ನೆಪಕ್ಕೆ ಹೃದಯಾಘಾತ ಮರಣ ಹೊಂದಿರುವ ಪರಿಸ್ಥಿತಿಗಳು ಸಹ ಬೆಳಕಿಗೆ ಬಂದಿದೆ. ಹಾಗೂ ಸೌಹಾರ್ದದಲ್ಲಿ ವಂಚನೆಗೆ ಸಹಕರಿಸಿದ ಲೆಕ್ಕ ಪರಿಶೋಧಕರ ಸನ್ನದು ರದ್ದು ಮಾಡಬೇಕು. ಮತ್ತು ಇದರಲ್ಲಿ ಭಾಗಿಯಾದ ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಸದಾಶಿವ ಬರಟಗಿ, ಚಂದ್ರಾಮ ತೆಗ್ಗಿ, ಸುಭಾಸ ಕುಂಟೋಜಿ, ಆಯ್.ಬಿ.ಸಾರವಾಡ, ಎಸ್, ಜಿ.ಸಂಗೊಂದಿಮಠ, ಬಸವರಜ ಇವಣಗಿ, ವಿಠ್ಠಲ ಕೊಣ್ಣೂರ, ಬಸವರಾಜ ಬಾಡಗಿ, ಸುರೇಶ ಮನಗೂಳಿ, ಮನೋಹರ ಜಾಲಗೇರಿ, ಮಹಾಂತಯ್ಯ ಗುರುಮಠ, ಆನಂದ ಓತಗೇರಿ, ಮಲ್ಲಿಕಾರ್ಜುನ ಗರಸಂಗಿ, ಬಿ.ಎಸ್. ನಂದ್ಯಾಳ, ರೇಣುಕಾ ಮಾಲಗಾರ, ಸುಶೀಲಾಬಾಯಿ ರಂಜಣಗಿ, ಸುರೇಶಬಾಬು ಇಟಗಿ, ಮಹಾಂತೇಶ ನಡಕಟ್ಟಿ, ಅಬ್ದುಲರಜಾಕ, ಜಗದೀಶ ಹಿರೇಮಠ, ಕೆ.ಎಸ್.ಸಿನ್ನೂರ, ಹರೀಶ ಮೋಟೆಕರ, ನಾಗಪ್ಪ ಪ್ಯಾಟಿಗೌಡರ, ರಾಜಶ್ರೀ ಗೊರನಾಳ, ಚಂದಪ್ಪ ಮಾವಡಿ, ರೇಖಾ ಆವೇರಿ, ಕೆ.ಡಿ. ನರಗುಂದ, ವಿಠ್ಠಲ ಕುಲಕರ್ಣಿ, ರುದ್ರಯ್ಯ ಮಠಪತಿ, ಈರಪ್ಪ ತೊರವಿ, ಆಯ್.ಜಿ. ದಿನ್ನಿಮನಿ, ಸಂದೀಪ ಪಾತ್ರೋಟಿ, ಎಸ್.ವಿ. ಜೋಗೂರ, ಮುದಕಪ್ಪ ಪೂಜಾರಿ, ಅಶೋಕ ಬೂದಿಹಾಳ ಇನ್ನಿತರರು ಇದ್ದರು.