ಮುರಗುಂಡಿ ಮೊರಾರ್ಜಿ ವಸತಿ ಶಾಲೆಗೆ ಭೇಟಿ, ಮಕ್ಕಳೊಂದಿಗೆ ಊಟದ ರುಚಿ ಸವಿದ ಶಾಸಕ ಲಕ್ಷ್ಮಣ ಸವದಿ

ಅಥಣಿ :ಸೆ.15: ಜೀವನದಲ್ಲಿ ತಾಯಿಯ ಋಣ ಹಾಗೂ ಅನ್ನದ ಋಣ ನಾನು ಮಾತ್ರವಲ್ಲ ಜಗತ್ತಿನ ಯಾವ ವ್ಯಕ್ತಿಯಿಂದಲೂ ತೀರಿಸಲು ಸಾಧ್ಯವಿಲ್ಲ. ಜನ್ಮ ನೀಡಿದ ತಾಯಿಯನ್ನು ಗೌರವದಿಂದ ಕಾಣಬೇಕು, ಎಂದು ಶಾಸಕ ಲಕ್ಷ್ಮಣ ಸವದಿ ಅವರು ಮುರಾರ್ಜಿ ವಸತಿ ಶಾಲೆ ಮಕ್ಕಳಿಗೆ ನೀತಿ ಪಾಠ ಹೇಳಿದರು
ಅವರು ತಾಲೂಕಿನ ಮುರಗುಂಡಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಹಾಗೂ ಮಕ್ಕಳಿಗೆ ನೀಡುವ ಆಹಾರ ಪರಿಶೀಲಿಸಿ ಮಾತನಾಡುತ್ತಿದ್ದರು, ನಮ್ಮನ್ನು ಹೆತ್ತು ಹೊತ್ತು ಸಾಕಿದ ತಾಯಿಯ ಋಣ ಎಂದಿಗೂ ನಾವು ತೀರಿಸಲಾಗದು. ಆದ್ದರಿಂದ ಹೆತ್ತವರು ನಮ್ಮ ಕಣ್ಣಿಗೆ ಕಾಣುವ ಜೀವಂತ ದೇವರು. ಅವರನ್ನು ಚೆನ್ನಾಗಿ ನೋಡಿಕೊಂಡು ಸಾಧ್ಯವಾದಷ್ಟು ಅವರ ಋಣ ತೀರಿಸುವಂತಹ ಸೇವೆ ಮಾಡಬೇಕು.
“ಅನ್ನದ ಋಣ ತೀರಿಸಲಾಗದ್ದಂಥದ್ದು”
ನಾವು ತಿನ್ನುವ ಪ್ರತಿಯೊಂದು ಅನ್ನದ ಅಗಳಿನ ಮೇಲೆ ನಮ್ಮ ಹೆಸರು, ಋಣಾನುಬಂಧ ಇರುತ್ತದೆ ಎಂಬ ಮಾತಿದೆ. ಅದರಂತೆ ರೈತನು ಶ್ರಮಪಟ್ಟು ದುಡಿದು ಭೂಮಿತಾಯಿಗೆ ಬೆವರು ಹರಿಸಿ ಬೆಳೆ ಬೆಳೆದು ನಮಗೆ ಅನ್ನವನ್ನು ನೀಡುತ್ತಾನೆ. ಆದ್ದರಿಂದ ಯಾರೂ ಕೂಡ ನಮ್ಮ ಜೀವಕ್ಕೆ ಉಸಿರಾಗಿರುವ ಅನ್ನವನ್ನು ಹಾಳು ಮಾಡಬಾರದು. ತಾಟಿನಲ್ಲಿ ಒಂದು ಅಗಳು ಅನ್ನವನ್ನು ಕೂಡ ಬಿಡಬಾರದು. ಊಟವಾದ ಬಳಿಕ ತಾಟಿನಲ್ಲಿ ನೀರು ಹಾಕಿ ಕುಡಿಯಬೇಕು.
ಹೀಗೆ ವಿದ್ಯಾರ್ಥಿಗಳಿಗೆ ನೀತಿ ಪಾಠ ಮಾಡಿದರು,
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಗ್ಗೆ ಶಾಸಕ ಲಕ್ಷ್ಮಣ ಸವದಿ ಪ್ರಶಂಸೆ :-
ಮುರುಗುಂಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತನ್ನದೇ ಆದ ಹೆಸರಿದೆ. ಅದರಂತೆ ಇಲ್ಲಿನ ಬಡಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಹಾಗೂ ಉತ್ತಮ ರೀತಿಯ ವಸತಿ, ಊಟದ ವ್ಯವಸ್ಥೆ ಸೇರಿದಂತೆ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ವಸತಿ ನಿಲಯದಲ್ಲಿ ಸರಿಯಾದ ಸಮಯಕ್ಕೆ ಮೆನು ಪ್ರಕಾರ ಉಪಹಾರ, ಊಟ ನೀಡುತ್ತಿದ್ದಾರೆಯೇ? ಇಲ್ಲಿ ಏನಾದರೂ ಸಮಸ್ಯೆಗಳಿವೆಯೇ? ಎನ್ನುವುದನ್ನು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು, ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು-ನಮಗೆ ಇಲ್ಲಿನ ಶಿಕ್ಷಕರು, ಅಡುಗೆ ಸಿಬ್ಬಂದಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವುದೇ ಸಮಸ್ಯೆಗಳಿಲ್ಲ ಸರ್..ಎಂದು ತಿಳಿಸಿದರು. ಇದಕ್ಕೆ ಶಾಸಕ ಲಕ್ಷ್ಮಣ ಸವದಿಯವರು ಶಾಲಾ ಶಿಕ್ಷಕರನ್ನು, ಅಡುಗೆ ಸಿಬ್ಬಂದಿಯವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದರು.
ಮಕ್ಕಳೊಂದಿಗೆ ಊಟ ಸವಿದರು :-
ವಸತಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಊಟವನ್ನು ನೀಡಲಾಗುತ್ತಿದೆಯೇ ಎನ್ನುವುದನ್ನು ತಿಳಿಯಲು ಶಾಸಕರು ಮಧ್ಯಾಹ್ನ ನೂರಾರು ಮಕ್ಕಳೊಂದಿಗೆ ಬೆರೆತು, ಅವರೊಟ್ಟಿಗೆ ಕುಳಿತು ಊಟ ಮಾಡಿ, ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದರು. ಈ ಮೂಲಕ ತಮ್ಮ ಸರಳ ನಡೆಯೊಂದಿಗೆ ಮಕ್ಕಳ ಮೇಲೆ ಅವರಿಗಿರುವ ಕಾಳಜಿ, ಪ್ರೀತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಊಟದ ಕೊಠಡಿಯ ಗೋಡೆಯ ಮೇಲೆ ಬರೆಯಲಾಗಿದ್ದ “ತಾಯಿಯ ಋಣ, ಅನ್ನದ ಋಣ ತೀರಿಸಲಾಗದು” “ಅನ್ನವನ್ನು ಕೆಡಿಸುವುದು ಪಾಪದ ಕೆಲಸ” ಎಂಬ ಗಾದೆಯ ಮಾತುಗಳ ಬರಹವನ್ನು ಮಕ್ಕಳಿಗೆ ತೋರಿಸಿ, ಅವರಿಗೆ ಅರ್ಥೈಸುವಂತೆ ತಿಳಿಸಿ ಹೇಳಿದರು. ಈ ಮಾತುಗಳನ್ನು ವಿದ್ಯಾರ್ಥಿಗಳು ಚಾಚೂ ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುರಗುಂಡಿ ಗ್ರಾಮದ ಮುಖಂಡರಾದ ಭರಮಾ ಮಗಾಡಿ, ಬೀಮು ಸಡ್ಡಿ, ಕುಮಾರ ಪಾಟೀಲ, ಅಮರ್ ಕೋಳಿ, ಮುತ್ತಪ್ಪ ಮಗಾಡಿ, ಮಲ್ಲು ಕುಳ್ಳೊಳಿ, ಸುನೀಲ ಪವಾರ, ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.