ಮುಫ್ತಿ ಬಿಡುಗಡೆಗೆ ರಾಹುಲ್ ಒತ್ತಾಯ

ನವದೆಹಲಿ, ಆ. ೨- ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನದಲ್ಲಿರಿಸಿರುವ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಇಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ರಾಜಕೀಯ ನಾಯಕರನ್ನು ಸೂಕ್ತ ಕಾರಣವಿಲ್ಲದೆ ಬಂಧನದಲ್ಲಿರಿಸಿದೆ. ಅವರು ಗೃಹಬಂಧನದಲ್ಲಿ ಈಗಾಗಲೇ ಸಾಕಷ್ಟು ಕಾಲವಿದ್ದಿರುವ ಹಿನ್ನೆಲೆಯಲ್ಲಿ ಈಗ ಅವರನ್ನು ಬಿಡುಗಡೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಅವರ ಬಂಧನ ಅವಧಿ ವಿಸ್ತರಣೆ ಸರಿಯಲ್ಲ. ಇದರಿಂದ ಕಾನೂನು ನಿಂದನೆ ಮತ್ತು ಸಾಂವಿಧಾನಿಕ ಹಕ್ಕುಗಳ ನಿಂದನೆಯಾಗುತ್ತಿದೆ ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದರು.
ಕಳೆದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಬೆನ್ನಲ್ಲೆ ಅವರನ್ನು ಸುರಕ್ಷತಾ ಕಾಯ್ದೆಯಡಿ ಕಳೆದ ೧ ವರ್ಷದಿಂದ ಬಂಧನದಲ್ಲಿರಿಸಲಾಗಿದೆ.