ಮುನ್ನೆಚ್ಚರಿಕಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಗದಗ, ಡಿ. 29- ರಾಜ್ಯ ಸರ್ಕಾರದ ನಿರ್ದೇಶನದಂತೆ ಜ.1 ರಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಅಗತ್ಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನೇವರಿ 1 ರಂದು ಶಾಲೆಗಳು ಪ್ರಾರಂಭವಾಗುವದಕ್ಕೂ ಮುಂಚೆ ರಾಜ್ಯ ಸರ್ಕಾರದ ನಿರ್ದೇಶನದನ್ವಯ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೊಳಪಡಬೇಕು. ಆಯಾ ಕ್ಷೆತ್ರ ಶಿಕ್ಷಣಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಲಯ ವಾರು ಶಿಕ್ಷಕರ ಪಟ್ಟಿಯೊಂದಿಗೆ ಪರೀಕ್ಷೆಗೆ ಒಳಪಟ್ಟು ಪರೀಕ್ಷಾ ವರದಿ ಪಡೆಯಲು ಕ್ರಮ ಜರುಗಿಸುವಂತೆ ಸೂಚಿಸಿದರು. ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಬರುವ ಶಾಲೆಗಳನ್ನು ಆಯಾ ಗ್ರಾಮ ಪಂಚಾಯತಗಳಿಂದ ಸ್ಯಾನಿಟೈಸ್ ಮಾಡಲು ಹಾಗೂ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿನ ಶಾಲೆಗಳ ಸ್ಯಾನಿಟೈಸ ಮಾಡಿಸಲು ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಭೇಟಿ ಮಾಡಿ ಸ್ಯಾನಿಟೈಸ್ ಮಾಡಿಸಲು ಕ್ರಮ ಜರುಗಿಸಲು ತಿಳಿಸಿದರು. ಪ್ರತಿ ಶಾಲೆಗಳಲ್ಲಿ ಥರ್ಮಲ್ ಸ್ಕ್ಯಾನರಗಳ ಹಾಗೂ ಕೈ ತೊಳೆಯಲು ಅಗತ್ಯದ ವ್ಯವಸ್ಥೆ ಮಾಡಿಟ್ಟುಕೊಳ್ಳಲು ತಿಳಿಸಿದರು. ಶಾಲೆಗೆ ಬರುವ ಎಲ್ಲ ಮಕ್ಕಳು ಕಡ್ಡಾಯವಾಗಿ ಮಾಸ್ಕ ಧರಿಸಿ ಶಾಲೆಗೆ ಆಗಮಿಸಲು ಸೂಚಿಸಬೇಕು. ಶಾಲೆಗೆ ಆಗಮಿಸುವ ಪ್ರತಿ ವಿಧ್ಯಾರ್ಥಿಯ ಆರೋಗ್ಯದ ಮೇಲೆ ನಿಗಾ ವಹಿಸಲು ಒಬ್ಬ ಶಿಕ್ಷಕರನ್ನು ನೇಮಿಸಿ ಅವರಿಂದ ಪ್ರತಿದಿನದ ವರದಿ ಪಡೆಯಲು ಕ್ರಮ ವಹಿಸಬೇಕು. ಶಾಲೆಗೆ ಆಗಮಿಸುವ ವಿಧ್ಯಾರ್ಥಿಗಳಿಗೆ ಶಾಲೆಯಲ್ಲಿ ಬಿಸಿ ಕುಡಿಯುವ ನೀರು ಪೂರೈಸಲು ಅಗತ್ಯದ ವ್ಯವಸ್ಥೆ ಮಾಡಿಟ್ಟುಕೊಳ್ಳುವಂತೆ ತಿಳಿಸಿದರು. ಶಾಲೆಗೆ ಆಗಮಿಸಲು ಹಿಂದೇಟು ಹಾಕುವಂತಹ ವಿದ್ಯಾರ್ಥಿಗಳಿ ಪರ್ಯಾಯ ವ್ಯವಸ್ಥೆಗಳ ಮೂಲಕ ತರಗತಿ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನ್ನವರ, ಡೈಯಟ್ ಪ್ರಾಂಶುಪಾಲ ಎಸ್.ಡಿ.ಘಾಂಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.