ಮುನ್ನೂರು ಕಾಪು ಬಲಿಜ ಸಮಾದಿಂದ ಪ್ರತಿಭಾ ಪುರಸ್ಕಾರ

ಶೈಕ್ಷಣಿಕ ಸಾಧನೆ ಸಮಾಜಕ್ಕೆ ಹೆಮ್ಮೆ – ಪಾಪಾರೆಡ್ಡಿ
ರಾಯಚೂರು.ಜ.೦೫- ಮುನ್ನೂರುಕಾಪು ಸಮಾಜ ಕಳೆದ ೩೦ ವರ್ಷದಲ್ಲಿ ಶೈಕ್ಷಣಿಕವಾಗಿ ಅಪಾರ ಅಭಿವೃದ್ಧಿ ಹೊಂದುವ ಮೂಲಕ ರಾಜ್ಯ, ದೇಶ ಮತ್ತು ವಿದೇಶಗಳಲ್ಲೂ ನಮ್ಮ ಸಮುದಾಯದ ವ್ಯಕ್ತಿಗಳು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಹಿರಿಯ ನಾಯಕರಾದ ಎ.ಪಾಪಾರೆಡ್ಡಿ ಅವರು ಹೇಳಿದರು.
ಅವರಿಂದು ನಗರದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಆಯೋಜಿಸಲಾದ ಮುನ್ನೂರು ಕಾಪು ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೧೯೭೦ ರಲ್ಲಿ ಏಕೈಕ ನಾನು ಮಾತ್ರ ಪದವೀಧರನಾಗಿದ್ದೆ. ೧೯೮೦ ರಲ್ಲಿ ದಶಕದಲ್ಲಿ ಪಿಯುಸಿ ಪದವಿ ಮಾಡಿದವರ ಸಂಖ್ಯೆಗೆ ಮಾತ್ರ ಸೀಮಿತಗೊಂಡಿದ್ದೇವು. ಆದರೆ, ೨೦೦೦ ನಂತರ ಮುನ್ನೂರುಕಾಪು ಸಮಾಜ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮೂಲಕ ಇಂದು ಎಲ್ಲಾ ರಂಗಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
೨೫ ಜನ ವೈದ್ಯಕೀಯ ಶಿಕ್ಷಣದಲ್ಲಿ ಮುಂದುವರೆದಿದ್ದು, ೧೦ ಜನ ವೈದ್ಯಕೀಯ ಪದವಿ ಪೂರ್ಣಗೊಳಿಸಿ, ಸ್ನಾತಕೋತ್ತರ ಪದವಿಯಲ್ಲಿ ಮುಂದುವರೆದಿದ್ದಾರೆ. ಎಂ.ಡಿ. ಪದವಿಯೊಂದಿಗೆ ವೈದ್ಯಕೀಯ ಸೇವೆಯಲ್ಲಿ ತೊಡಗಿದವರು ಈ ಸಮಾಜದಲ್ಲಿದ್ದಾರೆ. ಈ ಹಿಂದೆ ಏಕೈಕ ಭೀಮರೆಡ್ಡಿ ಅವರು ಮಾತ್ರ ವಕೀಲರಾಗಿರುವಂತಹ ಕಾಲ ಬದಲಾಗಿ ಇಂದು ಸಮಾಜದ ೨೫ ಕ್ಕೂ ಅಧಿಕ ಜನರು ವಕೀಲ ವೃತ್ತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಮುನ್ನೂರುವಾಡಿಯಿಂದ ಜಪಾನ್, ಅಮೇರಿಕಾ ಇನ್ನಿತರ ದೇಶಗಳಲ್ಲಿ ಸೇವೆ ಸಲ್ಲಿಸುವ ಎತ್ತರಕ್ಕೆ ಬೆಳೆದಿರುವುದು ಸಮಾಜ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.
ಬೆಂಗಳೂರು, ಹೈದ್ರಾಬಾದ್ ಹಾಗೂ ಇತರೆ ರಾಜ್ಯದ ರಾಜಧಾನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೇ.೩೫ ರಷ್ಟು ಅಂಕ ಪಡೆಯಲು ಸಾಧ್ಯವಾಗದೇ, ಗಂಜ್‌ನಲ್ಲು ಗುಮಾಸ್ತಗಿರಿಗೆ ಸೀಮಿತವಾಗಿದ್ದ ನಮ್ಮ ಸಮುದಾಯದ ಮಕ್ಕಳು ಇಂದು ಶೇ.೯೮, ೯೫, ೯೦ ಅಂಕಗಳನ್ನು ಸಾಧಿಸುವ ಮಟ್ಟಕ್ಕೆ ಭೌದ್ಯಿಕತೆ ಬೆಳೆಸಿಕೊಂಡಿದ್ದಾರೆ. ಮುನ್ನೂರುಕಾಪು ಸಮಾಜ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದುವರೆಯುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಎತ್ತರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಇದು ಇಡೀ ಸಮುದಾಯ ಸಂತಸ ಪಡುವ ಸಂದರ್ಭವಾಗಿದ್ದು, ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಶೈಕ್ಷಣಿಕ ಸಾಧನೆಗೈಯ್ಯಲಿ ಎಂಬ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಮೂಲಕ ಮಕ್ಕಳ ಬೆನ್ನು ತಟ್ಟಲಾಗುತ್ತದೆ.
ಇಂತಹ ಕಾರ್ಯಕ್ರಮಗಳಿಗೆ ಮುನ್ನೂರುಕಾಪು ಸಮಾ ಬೆನ್ನುಲುಬಾಗಿ ನಿಲ್ಲುವ ಮೂಲಕ ಇಂದು ಯಶಸ್ವಿಗೆ ದಾರಿ ಮಾಡಿ, ನಮ್ಮ ಮಕ್ಕಳು ಮತ್ತಷ್ಟು ಶೈಕ್ಷಣಿಕ ಸಾಧನೆ ಮಾಡಲು ವೇದಿಕೆ ನಿರ್ಮಿಸಿಕೊಟ್ಟಿದೆಂದು ಈ ಸಂದರ್ಭದಲ್ಲಿ ಅವರು, ಸಮುದಾಯ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿರುವುದನ್ನು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಮಾತನಾಡುತ್ತಾ, ಶ್ರೀ ಕೃಷ್ಣದೇವರಾಯ ಪುತ್ಥಳಿ ಅನಾವರಣಕ್ಕೆ ಈಗಾಗಲೇ ನಗರಸಭೆ ಸಭೆಯಲ್ಲಿ ಅನುಮತಿ ನೀಡಲಾಗಿದ್ದು, ಎಲ್ಲರ ಮನವಿಯಂತೆ ಶ್ರೀ ಕೃಷ್ಣ ದೇವರಾಯ ಫೆ.೧೪ರ ಜಯಂತಿಯೊಳಗೆ ಅವರ ಪುತ್ಥಳಿ ಅನಾವರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಶಿಕ್ಷಣದಿಂದ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮಹತ್ವವಾಗಿದೆಂದರು. ಜಗತ್ತಿನಲ್ಲಿ ಅತ್ಯಂತ ಶಕ್ತಿಯುತ ಆಯುಧ ಮತ್ತು ಜಗತ್ತನ್ನು ಬದಲಿಸುವ ಶಕ್ತಿ ಶಿಕ್ಷಣವಾಗಿದೆ.
ಈ ಸಮಾರಂಭದಲ್ಲಿ ರಾಮಣ್ಣ ಹವಳೆ ಅವರು ಮಾತನಾಡುತ್ತಾ, ಸುಮಾರು ೨೦೦೧ ರಿಂದ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯ ನಡೆಯುತ್ತಿದೆ.
ಈಗಾಗಲೆ ಒಂದು ಶಾಲೆ ಕಾರ್ಯ ನಿರ್ವಹಿಸುತ್ತದೆ ಮತ್ತು ಪ್ರಸಕ್ತ ವರ್ಷದಲ್ಲಿ ಇನ್ನೊಂದು ಶಾಲೆಯನ್ನು ತೆರೆಯಲಿದ್ದು, ಒಟ್ಟು ಎರಡು ಶಾಲೆಗಳು ತೆರೆದಂತಾಗಿದ್ದು, ಪಾಪಾರೆಡ್ಡಿಯವರು ಮೆಡಿಕಲ್ ರಿಸರ್ಚ್ ಸೆಂಟರ್ ಪ್ರಾರಂಭ ಮಾಡಲು ಸಂಕಲ್ಪ ಮಾಡಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು. ಸಮಾಜ ಸೇವೆ ಮುಖ್ಯ ಉದ್ದೇಶವಾಗಿಟ್ಟುಕೊಂಡು ನಗರ ಪ್ರದೇಶ ಪ್ರದಕ್ಷಿಣೆ ಮಾಡುವ ಮೂಲಕ ಸಮಸ್ಯೆ ಅರಿತು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಶ್ಲಾಘನೀಯ ಕಾರ್ಯವಾಗಿದೆಂದರು.
ಶಿಕ್ಷಣದಲ್ಲಿ ಮಕ್ಕಳ ಸಾಧನೆಗೆ ಪಾಲಕರ ಪಾತ್ರ ಮಹತ್ವವಾಗಿದ್ದು, ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳು ಹೆಚ್ಚಿನ ಓದಿನಲ್ಲಿ ತೊಡಗಲು ಪ್ರೇರೆಪಿಸುತ್ತವೆ ಎಂದು ಉಪನ್ಯಾಸಕಿ ರಾಜೇಶ್ವರಿ ಕಲ್ಲೂರು ಹೇಳಿದರು. ಬೆಲ್ಲಂ ನರಸರೆಡ್ಡಿ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ತಿಮ್ಮಾರೆಡ್ಡಿ, ಅಂಜನೇಯ, ಮೂಲಿಂಟಿ ನಾಗರೆಡ್ಡಿ, ಪುಂಡ್ಲ ನರಸರೆಡ್ಡಿ, ಜಿ.ಪಂ.ಸದಸ್ಯ ಎನ್.ಕೇಶವರೆಡ್ಡಿ, ಭಂಗಿ ನರಸರೆಡ್ಡಿ, ನಗರಸಭೆ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಶೇಖರರೆಡ್ಡಿ, ಫಕಿರಪ್ಪ ನರಸರೆಡ್ಡಿ, ನಗರಸಭೆ ಸದಸ್ಯರಾದ ಶ್ವೇತಾ, ಸುಜಾತ ಮಲ್ಲಾರೆಡ್ಡಿ, ಬಿ.ಕವಿತಾ ಬಿ.ತಿಮ್ಮಾರೆಡ್ಡಿ, ಎನ್.ವೆಂಕಟಮ್ಮ ಶ್ರೀನಿವಾಸ, ರೇಖಾ ಗೋವಿಂದ ರೆಡ್ಡಿ, ಎನ್.ಮೀನಾಕ್ಷಿ ಪೋಗಲ್, ವೆಂಕಟರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.