ಮುನಿರತ್ನ ಗೆದ್ದರೆ ಸಚಿವಸ್ಥಾನ ಖಚಿತ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಮಂಗಳೂರು, ನ.೪- ಆರ್.ಆರ್.ನಗರದ ಉಪ ಚುನಾವಣೆಯಲ್ಲಿ ಮುನಿರತ್ನ ಗೆದ್ದಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ವಾಗ್ಧಾನವನ್ನು ಉಳಿಸಿಕೊಳ್ಳಲಿದ್ದಾರೆ. ಶಿರಾ ಸಹಿತ ಎರಡೂ ಕ್ಷೇತ್ರದ ಉಪ ಚುನಾವಣೆಯು ರಾಜ್ಯ ಸರ್ಕಾರದ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲುವುದು ನಿಶ್ಚಿತ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಹಳೆಯಂಗಡಿಯಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಎರಡೂ ಕ್ಷೇತ್ರ ಸಹಿತ ನಾಲ್ಕು ವಿಧಾನಸಭಾ ಪರಿಷತ್‌ನ ಚುನಾವಣೆಯಲ್ಲಿಯೂ ಗೆಲುವು ನಮ್ಮದೇ, ಯಡಿಯೂರಪ್ಪ ಅವರ ದಕ್ಷ ಆಡಳಿತ ಕೋವಿಡ್, ನೆರೆಪರಿಹಾರ, ಡ್ರಗ್ಸ್ ನಿಯಂತ್ರಣದ ಸಹಿತ ಜನಪರ ಆಡಳಿತದಿಂದ ಜನರೇ ಮೆಚ್ಚಿಕೊಂಡಿರುವುದರಿಂದ ಇದು ಸಾಧ್ಯವಾಗಲಿದೆ. ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಶ್ಚಿತ ಎಂದು ಹೇಳಿದರು. ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ನಾಯಕರು, ಕಾರ್ಯಕರ್ತರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.