ಮುನಿಯಪ್ಪರಿಗೆ ವಿವಿ ಕುಲಪತಿಗಳಿಂದ ಆತ್ಮೀಯ ಆಹ್ವಾನ

ಕೋಲಾರ,ಜು,೩- ಬೆಂಗಳೂರು ಉತ್ತರ ವಿವಿ ೩ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿರುವ ಪತ್ರಕರ್ತ ಹಾಗೂ ದಲಿತಪರ ಹೋರಾಟಗಾರ ಸಿ.ಎಂ.ಮುನಿಯಪ್ಪ ಅವರನ್ನು ಜು.೪ ಘಟಿಕೋತ್ಸವಕ್ಕೆ ವಿವಿಯ ಕುಲಪತಿ ಪ್ರೊ.ನಿರಂಜನ ಆತ್ಮೀಯವಾಗಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ವಿವಿಯ ಸಂಪ್ರದಾಯದಂತೆ ಗೌರವ ಡಾಕ್ಟರೇಟ್‌ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪ ಅವರ ನಗರದ ಗಲ್‌ಪೇಟೆಯ ನಿವಾಸಕ್ಕೆ ಆಗಮಿಸಿದ ವಿವಿಯ ಕುಲಪತಿ ಪ್ರೊ.ನಿರಂಜನ, ಆಡಳಿತ ಕುಲಸಚಿವ ಪ್ರೊ.ನರಸಿಂಹಮೂರ್ತಿ ಮತ್ತಿತರರು ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲು ಆಹ್ವಾನಿಸಿದರು.
ಸಾಮಾಜಿಕ ಸೇವಾ ಕ್ಷೇತ್ರದಿಂದ ೪ ದಶಕಗಳಿಂದ ದಲಿತರು,ಶೋಷಿತರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೋಲಾರದ ಹಿರಿಯ ಪತ್ರಕರ್ತ ಸಂಚಿಕೆ ದಿನಪತ್ರಿಕೆಯ ಸಂಪಾದಕ ಸಿ.ಎಂ.ಮುನಿಯಪ್ಪ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
೧೯೭೮ ರಿಂದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ ರಾಜ್ಯ ಸಮಿತಿ ಸದಸ್ಯರಾಗಿ ನಿರಂತರವಾದ ಹೋರಾಟದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದ ಮುನಿಯಪ್ಪ, ದಲಿತ ಭೂ ಹೋರಾಟಗಳು, ಜೀತಪದ್ದತಿ ನಿರ್ಮೂಲನೆಗೆ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಹಾಗೂ ದಲಿತರ ಶೈಕ್ಷಣಿಕ ಉನ್ನತಿಗೆ ಶ್ರಮಿಸಿದ್ದುಮಾತ್ರವಲ್ಲ, ದಲಿತ ಸಮುದಾಯದ ಸ್ವಾವಲಂಬಿ ಹಾಗೂ ಆತ್ಮಗೌರವದ ಬದುಕಿಗಾಗಿ ವೈಯುಕ್ತಿಕ ಬದುಕನ್ನು ಮುಡುಪಾಗಿಟ್ಟ ಐತಿಹಾಸಿಕ ಹಿನ್ನಲೆ ಗಮನಿಸಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಶ್ರೀಕೃಷ್ಣ, ಅದಿಮ ಸಂಸ್ಥೆಯ ಕೋಮಣ್ಣ ಮತ್ತಿರರಿದ್ದರು.