ಮುನವಳ್ಳಿಯಲ್ಲಿ ಪ್ರತಿಭಟನೆ


ಮುನವಳ್ಳಿ,ಏ.20: ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಅಮಾನುಷವಾಗಿ ಕೊಲೆ ಮಾಡಿದ ಆರೋಪಿ ಫಯಾಜ್ ಮೇಲೆ ಸೂಕ್ತ ಕಾನೂನು ಕ್ರಮತೆಗೆದು ಕೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರದಂದು
ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದ ಮುಖಂಡರುಗಳು ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು, ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಹಾಗೂ ಕಾಂಗ್ರೇಸ ಮುಖಂಡರುಗಳಾದ ಉಮೇಶ ಬಾಳಿ, ಅಂಬ್ರೀಷ ಯಲಿಗಾರ, ಚಂದ್ರು ಜಂಬ್ರಿ, ಮುನವಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸುವದರ ಜೊತೆಗೆ ಆರೋಪಿಗೆ ಖಠಿಣವಾದ ಶಿಕ್ಷೆಯನ್ನು ನೀಡಲು ಸರಕಾರವನ್ನು ಒತ್ತಾಯಿಸುವದಾಗಿ ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಹೆಣ್ಣು ಮಗಳ ಮೇಲೆ ಆಗಿರುವಂತ ಈ ಕೃತ್ಯವು ಅತ್ಯಂತ ಭೀಭತ್ಸ್ಯವಾಗಿದ್ದು, ಸರಕಾರದ ನಿರ್ಲಕ್ಷತೆಯಿಂದ ರಾಜ್ಯದಲ್ಲಿ ಜನರಿಗೆ ಸುರಕ್ಷತೆ ಇಲ್ಲದಾಗಿದೆ ಎಂದು ಆರೋಪಿಸಿದರು. ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದಂತ ವ್ಯಕ್ತಿಯನ್ನು ಎನ್‍ಕೌಂಟರ್ ಮಾಡುವ ಮೂಲಕ ಕೊಲೆಗಡುಕರಿಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ ಎಂದರು. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಹೆತ್ತವರು ತೀವ್ರ ದುಃಖದಲ್ಲಿದ್ದು, ಈ ಕೊಲೆಗಡುಕ ರಾಕ್ಷಸನಿಗೆ ಕಠಿಣ ಶಿಕ್ಷೆ ಆಗಲೇ ಬೇಕೆಂದು ಒತ್ತಾಯಿಸಿದರು.
ವಿರುಪಾಕ್ಷ ಮಾಮನಿ ಮಾತನಾಡಿ, ಗಲ್ಲುಶಿಕ್ಷೆ ವಿಧಿಸುವ ಮೂಲಕ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ನೀಡಬೇಕೆಂದು ಆಗ್ರಹಿಸಿದರು. ಪಂಚನಗೌಡ ದ್ಯಾಮನಗೌಡರ ಮತ್ತು ಸೌರವ್ ಚೋಪ್ರಾ ಮಾತನಾಡಿದರು.