ಮುದ್ರಣ ಕ್ಷೇತ್ರದ ಕಾರ್ಮಿಕರ ಸಂಘವು ಉದ್ಘಾಟನೆಗೊಂಡಿದ್ದು ಜಿಲ್ಲೆಯಲ್ಲಿ ದಾಖಲೆ: ಪತ್ರಕರ್ತೆ ಇಮಾಂಬಿ

ವಿಜಯಪುರ, ನ.14-ನಗರದ ಮಲ್ಲಿಕಾರ್ಜುನ ನಗರ ಶಿವಾಲಯ ಮಂಗಲ ಕಾರ್ಯಾಲಯದಲ್ಲಿ ಮುದ್ರಣಾಲಯ ಕಾರ್ಮಿಕರ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಹಾಗೂ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ನಗಾಠಾಣ ಮತಕ್ಷೇತ್ರದ ಶಾಸಕರಾದ ಚಿರಂಜೀವಿ ಅಭಿನವ ದೇವಾನಂದ ಚವ್ಹಾಣ ಅವರು ಕಾರ್ಯಕ್ರಮಕ್ಕೆ ಚಾಲನ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪತ್ರಕರ್ತೆ ಇಮಾಂಬಿ ನದಾಫ್ ಅವರು ಮಾತನಾಡಿ, ಮುದ್ರಣ ಕಾರ್ಮಿಕರಿಗೆ ಕೋವಿಡ್ -19 ಎಂಬ ಮಹಾಮಾರಿ ವಕ್ಕರಿಸದ ಕ್ಷಣ ಮುದ್ರಣ ಕ್ಷೇತ್ರಗಳೆಲ್ಲವೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಕೂಲಿ ಮಾಡುವ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಸಂಘಟನೆಗಳು, ಸರ್ಕಾರ ಹಾಗೂ ಮುಂತಾದವುಗಳಿಂದ ಸಹಾಯ ಪಡೆದುಕೊಂಡರೆ, ಮುದ್ರಣ ಕಾರ್ಮಿಕರು ಇದರಿಂದ ವಂಚಿತರಾಗಿರುವುದು ವಿಷಾಧನಿಯ ಎಂದು ಕಳವಳ ವ್ಯಕ್ತಪಡಿಸಿದರು.
ಮುದ್ರಣ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ವಿಜಯಪುರದಿಂದ ಕಾರ್ಮಿಕರ ಸಂಘವು ಉದ್ಘಾಟನೆಗೊಂಡಿದ್ದು, ಇತಿಹಾಸ ದಾಖಲಿಸಲಿದೆ. ಇಷ್ಟು ದಿನ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತಾ ಬಂದಿದೆ, ಎಲ್ಲ ಕಾರ್ಯಕ್ರಮಗಳಿಗೂ ಮುದ್ರಣದ ಅವಶ್ಯಕತೆ ತುಂಬಾ ಇದೆ, ಹೀಗಾಗಿ ಇಂದು ಈ ಸಂಘಟನೆ ಅಸ್ತಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರಲ್ಲದೆ, ಸಂಘಟನೆಯೂ ದೊಡ್ಡ ಹೆಮ್ಮೆರವಾಗಿ ಬೆಳೆದುಕೊಂಡು ಮುದ್ರಣ ಕಾರ್ಮಿಕರ ಅಭಿವೃದ್ಧಿಗಾಗಿ ಮುಂದೆಸಾಗಬೇಕೆಂದು ಹೇಳಿದರು.
ಅಧ್ಯಕ್ಷರಾಗಿ ಭಾಗವಹಿಸಿದ್ದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೋಳಸಂಗಿ ಅವರು ಮಾತನಾಡುತ್ತಾ, ಸರಕಾರದ ಸವಲತ್ತುಗಳನ್ನು ಮುದ್ರಣ ಕಾರ್ಮಿಕರು ಸಹಿತ ಪಡೆಯುವಂತಾಗಬೇಕು ಅಲ್ಲದೆ ಸಂಘಟನೆಯ ಮುಖಾಂತರ ಕಾರ್ಮಿಕರ ಕಷ್ಟಗಳಿಗೆ ವಿರಾಮ ಹೇಳಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಂಭುಲಿಂಗ ಸ್ವಾಮೀಜಿಗಳು ಆರ್ಶಿವಚನ ನೀಡುತ್ತಾ ಸಂಘವನ್ನು ಮಾಡುವುದು ಅಷ್ಟು ಸುಲಭವಲ್ಲ ಎಲ್ಲರನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದು ದೊಡ್ಡದಿದೆ, ಅಲ್ಲದೆ ಕಾರ್ಮಿಕರು ಸಮಾಜದಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದು ಅಂತಹವುಗಳನ್ನು ಹೋಗಲಾಡಿಸಬೇಕಾದರೆ ಇಂತಹ ಸಂಘಟನೆಗಳು ಹುಟ್ಟುಬೇಕು ಅಲ್ಲದೆ, ಅಣ್ಣ ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ,
ಅದರಂತೆ ನಮ್ಮ ಕಾರ್ಮಿಕರು ಸಹ ಕಾಯಕ ಮಾಡುವ ಮೂಲಕ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ, ಸಮಾಜದಲ್ಲಿ ಎಲ್ಲರು ದುಡಿಯಬೇಕು ದುಡಿದವರಿಗೆ ನ್ಯಾಯಯುತವಾದ ಅವರ ಹಕ್ಕು ಅವರಿಗೆ ಸಿಗಬೇಕಿದೆ, ಕಾರ್ಮಿಕರು ಸಹ ಹೋರಾಟವನ್ನು ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು ಹಾಗೂ ಸರಕಾರದ ಸವಲತ್ತುಗಳನ್ನು ಪಡೆಯಬೇಕು. ಅಲ್ಲದೆ ಒಬ್ಬ ವ್ಯಕ್ತಿ ಎದ್ದು ನಿಂತರೆ ಯಾರು ನೋಡುವುದಿಲ್ಲ ಅದರ ಬದಲಾಗಿ ಒಂದು ಸಂಘ, ಸಮೂಹ ಪ್ರತಿಭಟಿಸಿದರೆ ಸರಕಾರವೇ ಸಹಕಾರ ನೀಡುತ್ತದೆ ಎಂದರು, ಶ್ರಮ ಸಂಸ್ಕøತಿ ಅತ್ಯಂತ ಶ್ರೇಷ್ಠ ಸಂಸ್ಕೃತಿ ಎಂದರು.
ಅವರು ಇವರು ಎನ್ನದೆ ಎಲ್ಲರು ಒಂದೆ ಭಾವಿಸಿ ಒಂದು ಕುಟುಂಬವಾಗಿ ಕೆಲಸ ಮಾಡಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ ಎಂದು ಆರ್ಶಿವಚನ ನೀಡಿದರು.
ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಸಿ.ಎಸ್. ಬುರಾಣಪೂರ ಮಾತನಾಡಿ, ಸಂಘದಲ್ಲಿರುವ ಸದಸ್ಯರೆಲ್ಲರೂ ಭೇದ ಭಾವವನ್ನು ಬಿಟ್ಟುಸಂಘವೇ ಒಂದು ಪರಿವಾರ ಮಾಡಿಕೊಂಡು ಹೋಗಬೇಕು. ಅಂದಾಗ ನಮ್ಮ ಸಂಘಕ್ಕೆ ಮೆರಗು ಬರುವುದು ಎಂದರು.
ಈ ಸಂದರ್ಭದಲ್ಲಿ ಮುದ್ರಣಾಲಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಚಿದಾನಂದ ವಾಲಿ ಮಾತನಾಡಿ, ಈ ಸಂಘವನ್ನು ಕಟ್ಟಬೇಕು ಎಂದು ಯಾವತ್ತು ನಾನು ಅಂದುಕೊಂಡಿರಲಿಲ್ಲ. ಕಾಲವೇ ಕಲಿಸಿದ ಪಾಠಗಳಿಂದಾಗಿ, ಆಧುನೀಕರಣದ ಭರಾಟೆಯಲ್ಲಿ ಡಿಜಿಟಲಿಕರಣಗೊಳ್ಳುತ್ತಿರುವ ಮುದ್ರಣಕ್ಷೇತ್ರಗಳು, ಬದಲಾಗುತ್ತಿರುವ ಕಾರ್ಮಿಕನ ಜೀವನ ಶೈಲಿ, ಹಾಗೂ ಅವರುಗಳ ಕುಂದು ಕೊರತೆಗಳನ್ನು ಸರ್ಕಾರಗಳಿಗೆ ಸರ್ಕಾರೇತರೇತರಿಗೆ ತಲುಪಲಿ, ಹಾಗೂ ನಮ್ಮನ್ನು ಗುರತಿಸಲಿ, ನಮ್ಮ ನೋವಿನ ಕೂಗು ಅವರಿಗೆ ಕೇಳಿಸಲಿ ಎಂಬ ಸದುದ್ದೇಶದಿಂದ ಈ ಸಂಘವನ್ನು ಕಟ್ಟಬೇಕಾಯಿತು.
ವಯಕ್ತಿಕವಾಗಿ ನಾನು ಸುಮ್ಮನೆ ಕುಳಿತು ಕೊಳ್ಳುವ ಜಾಯಮಾನದವನೇ ಅಲ್ಲ, ನನಗೆ ಎನಾದರೂ ಮಾಡಬೇಕು ಎಂಬ ತುಡಿತ ನನ್ನನ್ನು ಕಾಡುತ್ತದೆ. ಕೋವಿಡ್ 19 ಮಹಾಮಾರಿಯ ಅಬ್ಬರದಲ್ಲಿ ಅದೇಷ್ಟೋ ಜೀವಗಳು ಹಾರಿಹೋಗುತ್ತಿರುವಾಗ, ಅದೇಷ್ಟೋ ಕುಟುಂಬಗಳು ನರಳಾಡುತ್ತಿರುವಾಗ ಅದೇಷ್ಟೋ ಮಕ್ಕಳು ಆಟವಿಲ್ಲದೇ ಪಾಠವಿಲ್ಲದೇ ವದ್ದಾಡುತ್ತಿರುವಾಗ ನನಗನ್ನಿಸಿದ್ದು ನಾನೂ ಕೂಡಾ ಒಬ್ಬಂಟಿಯಾಗಿ ಒದ್ದಾಡುತ್ತಿದ್ದೇನೆ ಆದ ಕಾರಣಕ್ಕಾಗಿ ಈ ಒಂದು ಸಂಘದ ಪ್ರಾರಂಭಕ್ಕೆ ಅಡಿಗಲ್ಲು ಇಡಲಾಯಿತು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪ್ರಕಾಶ ಮಠ, ಕಾರ್ಯದರ್ಶಿ ವೆಂಕಟೇಶ ಕಪಾಳೆ, ಖಜಾಂಚಿ ಹನೀಫ್ ಮುಲ್ಲಾ, ನಿರ್ದೇಶಕರುಗಳಾದ ಮೃತುಂಜಯ ಶಾಸ್ತ್ರಿ, ಜಗದೀಶ ಶಹಾಪೂರ, ನಾಗರಾಜ ಬಿಸನಾಳ, ಈರಣ್ಣ ಹಡಪದ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ ಕುಲಕರ್ಣಿ ಇವರುಗಳಿಗೆ ಪದಗ್ರಹಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂತೋಷ ಹುಣಶ್ಯಾಳ, ಉಬೇದ ಜಾಹಾಗೀರದಾರ, ಈರಣ್ಣ ರಶ್ಮಿ, ಮುದ್ದಸೀರ ಖಾದಿಮ, ಮಹಾನಿಂಗಪ್ಪ ಗುಬ್ಬಿ, ದಿವಾಕರ ಕುಲಕರ್ಣಿ, ಮಹಾಂತೇಶ ಗುಣಕಿಮಠ, ಸುಭಾಸ, ಮಾಜೀದ ಕೂಡಗಿ, ವಿರೇಶ ಗಂಗಾವತಿ ಮುಂತಾದ ಮುದ್ರಕ ಮಾಲೀಕರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಕಾಶ ಮಠ ಹಾಗೂ ಶುಭಾ ಹತ್ತಳಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಕಪಾಳೆ ವಂದಿಸಿದರು.