ಮುದ್ದೇಬಿಹಾಳ ನಗರದಲ್ಲಿ ಮತದಾನ ಜಾಗೃತಿಗಾಗಿ ಬೃಹತ್ ಕಾಲ್ನಡಿಗೆ ಜಾಥಾ

ವಿಜಯಪುರ: ಮೇ.5:ವಿಧಾನಸಭೆ ಚುನಾವಣೆ-2023ರ ಮತದಾನದ ಜಾಗೃತಿ ಅಂಗವಾಗಿ ತಾಲೂಕಾಡಳಿತ ಮತ್ತು ತಾಲೂಕು ಪಂಚಾಯತಿ ಹಾಗೂ ತಾಲೂಕು ಸ್ವೀಪ್ ಸಮಿತಿ, ಮುದ್ದೇಬಿಹಾಳ ರವರ ಸಹಯೋಗದೊಂದಿಗೆ ಇಂದು ಮುದ್ದೇಬಿಹಾಳ ನಗರದಲ್ಲಿ ತಾಲೂಕು ಮಟ್ಟದ “ಮತದಾನ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ” ಕಾರ್ಯಕ್ರಮ ಜರುಗಿತು.
ತಾಲೂಕು ಪಂಚಾಯತಿ ಮುಂಭಾಗದಲ್ಲಿ ಚುನಾವಣಾ ಅಧಿಕಾರಿಗಳಾದ ಚಂದ್ರಕಾಂತ ಪವಾರ್ ಅವರು “ಮತದಾನ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ”ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾವು ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಅರ್.ಅಂಬೇಡ್ಕರ್ ವೃತ್ತ ಮೂಲಕ ಸಂಚರಿಸಿ ಮಾರ್ಕೆಟ್ ರಸ್ತೆ, ದ್ಯಾವಮ್ಮ ಗುಡಿ ವೃತ್ತ ಸಾಗಿತು. ನಂತರ ಬಸವೇಶ್ವರ ವೃತ್ತದಲ್ಲಿ ಜಾಗೃತಿ ಮೂಡಿಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜಾಥಾ ಕೊನೆಗೊಂಡಿತು.
ನಗರದ ಗಲ್ಲಿ-ಗಲ್ಲಿಗಳಲ್ಲಿ ಸಂಚರಿಸಿ ಮನೆ-ಮನೆಗೆ ತೆರಳಿ ಮತದಾನ ಕುರಿತು ತಿಳುವಳಿಕೆ ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಮತದಾನದ ಜಾಗೃತಿ ಮೂಡಿಸಲಾಯಿತು.
ಗಮನ ಸೆಳೆದ ಕುದುರೆ ಕುಣಿತ : ಮತದಾನ ಜಾಗೃತಿ ಅಂಗವಾಗಿ ನಡೆದ ಜಾಥಾದಲ್ಲಿ ” ಕುದುರೆ ಕುಣಿತ” ಆಯೋಜನೆ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಕುದುರೆ ಸಾಗಿ ಜನರ ಗಮನ ಸೆಳೆಯಿತು. ಕುದುರೆ ಹೆಜ್ಜೆ ಕುಣಿತ ಸಾರ್ವಜನಿಕರ ಗಮನ ಸೆಳೆದು ಮತದಾನ ಜಾಗೃತಿ ಅರಿವಿಗೆ ಸಾಕ್ಷಿಯಾಯಿತು.
ಅಲಂಕೃತಗೊಂಡ ಸ್ವಚ್ಛ ವಾಹಿನಿ : ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಸ್ವಚ್ಛ ವಾಹಿನಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು. ಸ್ವಚ್ಛ ವಾಹಿನಿಗಳನ್ನು ಸಿಂಗಾರಗೊಳಿಸಿ ಮತದಾನ ಜಾಗೃತಿ ಬ್ಯಾನರ್ ಗಳನ್ನು ಕಟ್ಟಲಾಗಿತ್ತು. ಒಂದರಂತೆ ಒಂದು ಅಲಂಕೃತಗೊಂಡು ಜನರ ಗಮನ ಸೆಳೆದವು. ಅಲ್ಲದೆ ಸ್ವಚ್ಛ ವಾಹಿನಿಗಳಲ್ಲಿ ಮತದಾನ ಜಾಗೃತಿ ಜಿಂಗಲ್ಸ್ ಆಳವಡಿಸಿ ವ್ಯಾಪಾಕ ಪ್ರಚಾರ ಮಾಡಲಾಯಿತು. ಸ್ವಚ್ಛ ವಾಹಿನಿ ಜೊತೆಗೆ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಚಂದ್ರಕಾಂತ ಪವಾರ್ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು, ಮೇ 10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಿ. ಈ ಬಾರಿ ವಿಕಲಚೇತನರಿಗೆ, ವಯೋವೃದ್ಧರಿಗೆ ಮನೆಯಿಂದಲೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಮತದಾನದಿಂದ ವಂಚಿತರಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಕರೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವ್ಹಿ.ಎಸ್.ಹಿರೇಮಠ, ತಾ.ಪಂ.ಯೋಜನಾಧಿಕಾರಿಗಳಾದ ಖೂಬಾಸಿಂಗ್ ಜಾಧಬ್, ತಾಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು.