ಮುದ್ದೇಬಿಹಾಳ ತಾಲೂಕಿನಲ್ಲಿ ಸಿಇಓ ರಾಹುಲ್ ಶಿಂಧೆ ಪ್ರವಾಸ: ಪ್ರಗತಿ ಪರಿಶೀಲನಾ ಸಭೆ

ವಿಜಯಪುರ, ಜು.21-ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜುಲೈ 20ರಂದು ಮುದ್ದೇಬಿಹಾಳ ತಾಲೂಕಿನಲ್ಲಿ ಪ್ರವಾಸ ಕೈಗೊಂಡರು.
ಮುದ್ದೇಬಿಹಾಳ ತಾಲೂಕಿನ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಕುರಿತು ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಸಿಇಓ ಅವರು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ತಾಲೂಕಿನಲ್ಲಿ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕು. ಬೇಡಿಕೆಗೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿಯ ಪ್ರತಿ ಹಳ್ಳಿಗಳಲ್ಲೂ ಜನರಿಗೆ ಉದ್ಯೋಗ ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಕೇಂದ್ರ ಸ್ಥಾನದಲ್ಲಿರಲು ಸೂಚನೆ: ತಾಲೂಕಿನಲ್ಲಿ ನರೇಗಾ ಯೋಜನೆಯ ಮಾನವ ದಿನಗಳ ಸೃಜನೆ ಕಡಿಮೆ ಇರುತ್ತದೆ. ವ್ಯಾಪಕ ಪ್ರಚಾರ ಕೈಗೊಂಡು ಸಮುದಾಯಿಕ ಕಾಮಗಾರಿಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಮಹಿಳೆಯರು, ವೃದ್ಧರು ಮತ್ತು ವಿಕಲಚೇತನರಿಗೆ ಹೆಚ್ಚು ಅವಕಾಶ ನೀಡಿ ಅವರಿಗೆ ಆದ್ಯತೆಯ ಮೇರೆಗೆ ಸಕಾಲದಲ್ಲಿ ಉದ್ಯೋಗ ಒದಗಿಸಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಮೂಲಸ್ಥಾನದಲ್ಲಿದ್ದು, ನರೇಗಾ ಪ್ರಗತಿಗೆ ಸೂಕ್ತ ಕ್ರಮಕೈಗೊಳ್ಳಬೇಕು.
ಪಿಡಿಓಗಳಿಗೆ ಎಚ್ಚರಿಕೆ: ಶೇ.60ರಷ್ಟು ಮಾನವ ದಿನಗಳ ಸೃಜನೆ ಮಾಡದೇ ಇರುವ ಗ್ರಾಮ ಪಂಚಾಯತಿಗಳಿಗೆ ಸಾಮಗ್ರಿಗಳನ್ನು ಉಪಯೋಗಿಸಿ ಮಾಡುವ ಕಾಮಗಾರಿಗಳ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಮಾನವ ದಿನಗಳ ಸೃಜನೆ ಹಾಗೂ ಮಹಿಳೆಯರ ಭಾಗವಹಿಸುವಿಕೆಯ ಪ್ರಗತಿಯಲ್ಲಿ ಕಡಿಮೆ ಇದ್ದ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಇನ್ಮುಂದೆಯೂ ನಿರ್ಲಕ್ಷ್ಯ ವಹಿಸುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ತಾಪಂ ಇಓಗಳಿಗೆ ನಿರ್ದೇಶನ ನೀಡಿದರು.
ಕಾಮಗಾರಿ ಪೂರ್ಣಗೊಳಿಸಲು ಗಡುವು: 2021-2022ನೇ ಸಾಲಿನಲ್ಲಿ ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ ಆಯ್ಕೆಯಾಗಿದ್ದ ಮುದ್ದೇಬಿಹಾಳ ತಾಲೂಕಿನ ರೂಡಗಿ, ಆಲೂರು, ಕವಡಿಮಟ್ಟಿ ಹಾಗೂ ತಾಳಿಕೋಟೆ ತಾಲೂಕಿನ ಬಿ.ಸಾಲವಾಡಗಿ, ಬಾವೂರು ಗ್ರಾಮ ಪಂಚಾಯತಿಗಳ ಪ್ರಗತಿ ಕುರಿತು ವಿಚಾರಿಸಿದ ಸಿಇಒ ಅವರು, ಸದರಿ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಪ್ರಗತಿ ಹಂತದ ಕಾಮಗಾರಿಗಳನ್ನು ಅಗಷ್ಟ್ 15 ರೊಳಗೆ ಮುಕ್ತಾಯಗೊಳಿಸಬೇಕು ಎಂದು ಗಡುವು ವಿದಿಸಿದರು.
ಅನುಮೋದನೆಗೆ ಸಲ್ಲಿಸಲು ಸೂಚನೆ: ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ 2022-23ನೇ ಸಾಲಿಗೆ ಆಯ್ಕೆಯಾದ ಕುಂಟೋಜಿ ಹಾಗೂ ಮಡಿಕೇಶ್ವರ ಗ್ರಾಮ ಪಂಚಾಯತಿಯ ಕ್ರಿಯಾಯೋಜನೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಗೆ ಅನುಮೋದನೆಗಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅನುಷ್ಠಾನ ವಿಳಂಬವಾದರೆ ಸೂಕ್ತ ಕ್ರಮ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ಗ್ರಾಮ ಪಂಚಾಯತಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತಾಲೂಕಿನಲ್ಲಿ ಬಹುತೇಕ ಹಳ್ಳಿಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಹಿರೇಮುರಾಳ, ತಂಗಡಗಿ, ಆಲೂರ, ಮಡಿಕೇಶ್ವರ ಹಾಗೂ ಕೋಳೂರ ಗ್ರಾಮ ಪಂಚಾಯತಿಗಳ ಹಳ್ಳಿಗಳಲ್ಲಿ ಇದುವರೆಗೂ ಜಲ ಜೀವನ್ ಮಿಷನ್ ಕಾಮಗಾರಿಗಳು ಪ್ರಾರಂಭಗೊಳ್ಳದ ಕಾರಣ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಇಓ ಅವರು, ಸ್ಥಳೀಯವಾಗಿ ಏನೆ ಸಮಸ್ಯೆ ಇದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷರ, ಸದಸ್ಯರ ಹಾಗೂ ತಾಂತ್ರಿಕ ಅಭಿಯಂತರರ ಸಭೆ ಕರೆದು ಸಮಸ್ಯೆ ಬಗೆಹರಿಸಿ 10 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಶಾಲೆಗಳ ದುರಸ್ಥಿ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕೊಠಡಿಗಳನ್ನು ತ್ವರಿತವಾಗಿ ದುರಸ್ಥಿಗೊಳಿಸಲು ಕ್ರಮ ವಹಿಸಬೇಕು. ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಪಂಚಾಯತಿ ಅನುದಾನ ಅಥವಾ ನರೇಗಾ ಯೋಜನೆಯಡಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ತಾಲೂಕಿನ 133 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿದ್ದು, ಇವುಗಳಿಗೆ ಸ್ವಂತ ಕಟ್ಟಡ ಅಥವಾ ಸಮೀಪದ ಶಾಲೆಗಳಲ್ಲಿ ಕೊಠಡಿಗಳನ್ನು ಒದಗಿಸಿ ಅವುಗಳನ್ನು ಅಲ್ಲಿಗೆ ವರ್ಗಾಯಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಇಒ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ಅಭಿಯಂತರರಿಗೆ ಸೂಚನೆ: ತಾಲೂಕಿನಲ್ಲಿ ಬಾಕಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಬೂದು ನೀರು ನಿರ್ವಹಣಾ ಘಟಕ ನಿರ್ಮಾಣ, ಅಂಗನವಾಡಿ ಕಟ್ಟಡ ಹಾಗೂ ಶಾಲಾ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಪಂಚಾಯತ್ ರಾಜ್ ಇಂಜಿನಿಯರಿಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮುದ್ದೇಬಿಹಾಳದ ಎಸ್.ವಾಯ್.ಹೊಕ್ರಾಣಿ, ತಾಳಿಕೋಟೆಯ ಬಿ.ಎಸ್.ಬಿರಾದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಬಾಬು ಹೊಸಮನಿ, ಮುದ್ದೇಬಿಹಾಳ ತಾಲೂಕಿನ ತಾಲೂಕು ಯೋಜನಾಧಿಕಾರಿಗಳಾದ ಖೂಬಸಿಂಗ್ ಜಾಧವ್, ಮುದ್ದೇಬಿಹಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಜೆ ನಾಯಕ, ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಜಯಕುಮಾರ ರಾಠೋಡ, ತಾಳಿಕೋಟಿ ತಾಲೂಕಿನ ಸಹಾಯಕ ನಿರ್ದೇಶಕರಾದ ಸಾವಿತ್ರಿ ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.