ಮುದ್ದೆಬಿಹಾಳನ್ನು ಉದ್ಯಾನನಗರಿಯಾಗಿಸಲು ನಡಹಳ್ಳಿ ಕರೆ

ಮುದ್ದೇಬಿಹಾಳ:ಜೂ.8:ನಮ್ಮೂರು ಮುದ್ದೇಬಿಹಾಳ ಬೆಂಗಳೂರಿನಂತೆ ಸುಂದರ ನಗರವಾಗಬೇಕು ಎಂಬುದು ಬಹುಜನರ ಬಹುದಿನಗಳ ಕನಸು. ಇದನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇನೆ, ಇದಕ್ಕೆ ಪಟ್ಟಣದ ಎಲ್ಲ ಪರಿಸರ ಸಂಘಟನೆಗಳು ಹಾಗೂ ನಾಗರಿಕರು ಕೈಜೋಡಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಅವರು ಭಾನುವಾರ, ಪಟ್ಟಣದ ಡಾ.ಅಂಬೇಡ್ಕರ ವೃತ್ತದಲ್ಲಿ ಹುನಗುಂದ- ತಾಳಿಕೋಟಿ ರಾಜ್ಯ ಹೆದ್ದಾರಿಯ ಮಧ್ಯೆ ಇರುವ ರಸ್ತೆವಿಭಜಕದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಗಿಡಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆಶ್ರಯ ಬಡಾವಣೆಯಿಂದ (ಕುಂಟೋಜಿ ರಸ್ತೆ) ತಂಗಡಗಿ ರಸ್ತೆಯಲ್ಲಿರುವ ಹಡಲಗೇರಿ ಕ್ರಾಸ್ ವರೆಗೆ ಹಾಗೂ ಅಂಬೇಡ್ಕರ ವೃತ್ತದಿಂದ ಬಿದರಕುಂದಿ ಸೇತುವೆ ತನಕ ಡಿವೈಡರ್ ನಲ್ಲಿ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಇದಕ್ಕಾಗಿ ಆಂಧ್ರಪ್ರದೇಶದ ರಾಜಮುಂಡ್ರಿಯಿಂದ ವಿಶೇಷ ಅಲಂಕಾರಿಕ ಹಾಗೂ ಆಮ್ಲಜನಕ ನೀಡುವ ಗಿಡಗಳನ್ನು ತರಿಸಲಾಗಿದೆ.

ಹಂತ ಹಂತವಾಗಿ ಜೂನ, ಜುಲೈ ತಿಂಗಳಲ್ಲಿ ಗಿಡಗಳ ನೆಡುವಿಕೆ ಹಾಗೂ ಗಿಡಗಳಿಗೆ ಗ್ರಿಲ್ ಕೂಡಿಸುವ ಕೆಲಸ ಮಾಡಲಾಗುವುದು. ನಮ್ಮ ತಾಲ್ಲೂಕು ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳ ಮಧ್ಯೆ ಬರುತ್ತದೆ, ಈ ಹಿಂದೆ ಆಡಳಿತ ಮಾಡಿದವರು ಮನಸ್ಸು ಮಾಡಿದ್ದರೆ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಬಹುದಿತ್ತು. ಆದರೆ ಈಗ ಯಾರ ಮೇಲೆಯೂ ಆರೋಪ ಹೊರಿಸುವುದು ಬೇಡ ಎಂದ ಅವರು ಜನತೆ ಈ ಎಲ್ಲ ಗಿಡಗಳನ್ನು ತಮ್ಮ ಮಕ್ಕಳಂತಯೇ ಸಂರಕ್ಷಿಸುವ, ಬೆಳೆಸುವ ಕೆಲಸ ಮಾಡಬೇಕು. ಇಲ್ಲಿ ಯಾವುದೇ ಜಾಹೀರಾತು, ಕಸ, ಕಡ್ಡಿ ಹಾಕುವ ಕೆಲಸ ಮಾಡಬಾರದೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಸಗಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ಮಾಡಗಿ, ಅರಣ್ಯ ಇಲಾಖೆಯ ಜಿಲ್ಲಾ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಗಾರ, ಸಂತೋಷ ಅಜೂರ, ಕೆಬಿಜೆನ್ನೆಲ್ ಅರಣ್ಯಾಧಿಕಾರಿ ಮಹೇಶ ಪಾಟೀಲ, ವೆಂಕನಗೌಡ ಪಾಟೀಲ, ಸೋಮನಗೌಡ ಬಿರಾದಾರ, ಬಸಯ್ಯ ನಂದಿಕೇಶ್ವರಮಠ, ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಅಶೋಕ ವನಹಳ್ಳಿ ಮತ್ತಿತರರು ಇದ್ದರು.

ಯಾರಿಗೂ ಆಹ್ವಾನವಿಲ್ಲ: ಆಕ್ರೋಶ

ಕಾರ್ಯಕ್ರಮಕ್ಕೆ ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೆ, ಪಟ್ಟಣದಲ್ಲಿ ಕಳೆದ ಆರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಪರಿಸರದ ಕೆಲಸ ಮಾಡುತ್ತಿರುವ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರಿಗೆ ಹಾಗೂ ರಾಜ್ಯ ಹೆದ್ದಾರಿ ಅಗಲೀಕರಣ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಸೌಜನ್ಯಕ್ಕೂ ಅಧಿಕೃತ ಆಹ್ವಾನ ಕೊಡದೇ ಇರುವುದು ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಬಗ್ಗೆ ಹೋರಾಟ ಸಮಿತಿಯ ಸಂಚಾಲಕ ಸಿದ್ದರಾಜ ಹೊಳಿ ಅರಣ್ಯ ಇಲಾಖೆಯ ಎದುರೇ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು.