ಮುದ್ದಡಗಾದ ರೈತನಿಗೆ ಈರುಳ್ಳಿ ಶೇಖರಣೆ ಘಟಕ ನಿರ್ಮಿಸಲು ಕಾರ್ಯಾದೇಶ ವಿತರಣೆ

ಕಲಬುರಗಿ,ಮೇ.26:ಜಿಲ್ಲೆಯ ಕಮಲಾಪೂರ ತಾಲೂಕಿನ ಮುದ್ದಡಗಾದ ಯುವ ರೈತ ಗುರುರಾಜ ಧನ್ನೂರ ಅವರು ತಮ್ಮ ಹೊಲದಲ್ಲಿ ಬೆಳೆಯಲಾದ ಈರುಳ್ಳಿ ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಕಂಗಾಲಾಗಿರುವ ಕುರಿತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ಕೂಡಲೆ ಸಂಸದ ಉಮೇಶ ಜಾಧವ ಮತ್ತು ಕಲಬುರಗಿ ಗ್ರಾಮೀಣ ಬಸವರಾಜ ಮತ್ತಿಮೂಡ ಅವರು ಇತ್ತೀಚೆಗೆ ಮುದ್ದಡಗಾದ ರೈತನ ಹೊಲಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸಬ್ಸಿಡಿ ದರದಲ್ಲಿ ಈರುಳ್ಳಿ ಶೇಖರಣೆ ಘಟಕ ನಿರ್ಮಾಣಕ್ಕೆ ರೈತನಿಗೆ ಆದೇಶ ಪತ್ರ ನೀಡಿದರು.
ಇದಲ್ಲದೆ ಅಕಾಲಿಕ ಆನೆಕಲ್ಲು ಮಳೆ, ಔಕಳಿ ಮಳೆ ಬಂದರೆ ಈರುಳ್ಳಿ ಕಾಪಾಡಲು ಕೃಷಿ ಇಲಾಖೆಯಿಂದ ಎರಡು ತಾಡಪತ್ರಿಗಳು ನೀಡಲಾಯಿತು. ರೈತನಿಗೆ ಈರುಳ್ಳಿ ಖರೀದಿದಾರರ ಮೂಬೈಲ್ ಸಂಖ್ಯೆಗಳು ನೀಡಿ ಮಾರುಕಟ್ಟೆಯ ಲಿಂಕ್ ಸೌಲಭ್ಯ ಒದಗಿಸಲಾಯಿತು.
ಈರುಳ್ಳಿಯನ್ನು ವೇರ್ ಹೌಸನಲ್ಲಿಟ್ಟು ಬಾಂಡ್ ಪಡೆದು ಅದನ್ನು ಬ್ಯಾಂಕಿಗೆ ನೀಡಿ ಹಣಕಾಸಿನ ನೆರವು ಸಹ ಒದಗಿಸುವುದಾಗಿ ಸಂಸದ-ಶಾಸಕರು ರೈತನಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಶಾಸಕ ಬಿ.ಜಿ ಪಾಟೀಲ, ಮುಖಂಡ ಹμರ್Á ಸಲಗರ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರ, ಕಲಬುರಗಿ ತೋಟಗಾರಿಕೆ ಉಪ ನಿರ್ದೇಶಕರು, ಆಳಂದ ತಾಲೂಕಿನ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ತಾಲೂಕು ಅಧಿಕಾರಿಗಳು ಇದ್ದರು.