ಮುದ್ದಟನೂರು ಕ್ಯಾಂಪ್ ಸ.ಪ್ರಾ.ಶಾಲೆಯಲ್ಲಿ ಖಾಯಂ ಶಿಕ್ಷಕರೇ ಇಲ್ಲ”


ಸಂಜೆವಾಣಿ ವಾರ್ತೆ
ಸಿರಿಗೇರಿ ಆ.01. ಸಮೀಪದ ಮುದ್ದಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಿನಗರಕ್ಯಾಂಪ್‍ನಲ್ಲಿ 1ರಿಂದ 5ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಶಿಕ್ಷಕರು ಒಬ್ಬರೂ ಇಲ್ಲದೇ ವರ್ಗಾವಣೆಗೊಂಡಿದ್ದು. ಈಗ ಅತಿಥಿ ಶಿಕ್ಷಕರೊಬ್ಬರಿಂದ ಶಾಲೆ ನಡೆಸುವಂತಾಗಿದೆ. ಶಿಕ್ಷಕರ ಕೊರತೆಯಿಂದ ಕೆಲವು ಶಾಲೆಗಳಲ್ಲಿ 1ರಿಂದ 3,4,5,ನೇ ತರಗತಿಯ ಎಲ್ಲಾ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿ ಮಕ್ಕಳು ಗಲಾಟೆ ಮಾಡದಂತೆ ನೋಡಿಕೊಳ್ಳುವ ಕೆಲಸ ಮಾತ್ರ ನಡೆಯುಂತಾಗಿದೆ. ಪಕ್ಕದಲ್ಲಿನ ಅಂಬೆಡ್ಕರ್ ನಗರದ ಸರ್ಕಾರಿ ಶಾಲೆಗೂ ಇದೇ ಪರಿಸ್ಥಿತಿ ಇದ್ದು, ಈಗ ಇರುವ ಒಬ್ಬ ಮುಖ್ಯಶಿಕ್ಷಕರೂ ಬೇರೆಕಡೆ ಹೋಗುವ ಸಂದರ್ಭವಿದ್ದು, ಆ ಶಾಲೆಯೂ ಸರ್ಕಾರದ ಶಿಕ್ಷಕರಿಲ್ಲದ ಶಾಲೆಯಾಗಲಿದೆ. ಈಗ 10ವರ್ಷಕ್ಕೂ ಮೇಲ್ಪಟ್ಟು ಒಂದೇಕಡೆ ಕೆಲಸ ನಿರ್ವಹಿಸಿದ ಶಿಕ್ಷಕರ ಕೌನ್ಸಲಿಂಗ್ ಆಧಾರದ ವರ್ಗಾವಣೆಯಿಂದಾಗಿ ಸಿರುಗುಪ್ಪ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಹುತೇಕ ಶಾಲೆಗಳಲ್ಲಿ ಸರ್ಕಾರಿ ಖಾಯಂ ಶಿಕ್ಷಕರ ಕೊರತೆಯಾಗಿದೆ. ಈಗ ವರ್ಗಾವಣೆಗೊಂಡು ಶಾಲೆಬಿಟ್ಟು ಬೇರೆಕಡೆ ಹೋಗುವ ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ತಾಲೂಕಿನ ಶಾಲೆಗಳಿಗೆ ಬರುವ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಸಿರಿಗೇರಿಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಿಂದ 5 ಜನ ಶಿಕ್ಷಕರು ಹೋದರೆ, ಇಬ್ಬರು ಬಂದಿದ್ದಾರೆ. ಇನ್ನು 03ಜನ ಶಿಕ್ಷಕರ ಕೊರತೆಯಾಗಿದೆ.
ಅತಿಥಿ ಶಿಕ್ಷಕರದ್ದೂ ಕೊರತೆ: ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ಸರಿದೂಗಿಸುವ ಕೆಲಸ ನಡೆದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆ ಮುಂದುವರಿದಿದೆ. ಸರ್ಕಾರದಿಂದ ಈ ಸಾಲಿನಲ್ಲಿ ಬೇಗನೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಾಗಿದೆ ಆದರೂ. ಸಿರುಗುಪ್ಪ ತಾಲೂಕಿನಲ್ಲಿ ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಷ್ಟು ಆಗದೆ ಶೇಕಡಾ 70% ರಷ್ಟು ಅತಿಥಿ ಶಿಕ್ಷಕರನ್ನು ಮಾತ್ರ ತೆಗೆದುಕೊಂಡು ಶಿಕ್ಷಣ ಇಲಾಖೆ ಶಾಲೆಗಳನ್ನು ನಿರ್ವಹಣೆ ಮಾಡುವ ಪರಿಸ್ಥಿತಿ ಇದೆ. ಸಿರಿಗೇರಿ ಕ್ಲಸ್ಟರ್ ಒಂದರಲ್ಲಿಯೇ ಪ್ರಾಥಮಿಕ ಹಂತಕ್ಕೆ 40 ಅತಿಥಿ ಶಿಕ್ಷಕರು, ಹೈಸ್ಕೂಲ್ ಹಂತಕ್ಕೆ 7 ಅತಿಥಿ ಶಿಕ್ಷಕರನ್ನು ತೆಗೆದುಕೊಂಡು ಇವರ ಜವಾಬ್ದಾರಿಯಿಂದಲೇ ಶಾಲೆಗಳು ನಡೆಸುವಂತಾಗಿದೆ. ತಾಲೂಕಿನಲ್ಲಿ ಅದೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆಯಾಗಿರುವುದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ ಸಿರುಗುಪ್ಪ ತಾಲೂಕಿಗೆ ಹೆಚ್ಚಿನ ಶಿಕ್ಷಕರನ್ನು ನೀಡುವಂತೆ ಮಾಡಬೇಕೆಂಬುದು ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

One attachment • Scanned by Gmail