ಮುದ್ದಟನೂರು ಕ್ಯಾಂಪ್ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ 16. ಸಮೀಪದ ಮುದ್ದಟನೂರು ಕ್ಯಾಂಪು ಹತ್ತಿರದ ಶಿಫ್ಟಿಂಗ್ ವಿಲೇಜ್ ನಲ್ಲಿ ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ, ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಸಂಯುಕ್ತವಾಗಿ ಆಚರಿಸಲಾಯಿತು. ಮೊದಲಿಗೆ ಇಬ್ಬರು ಮಹಾ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ನಂತರ, ಕಾಲೋನಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಟಿ.ಮುನೇಶ್ವರ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಕಳೆದ ಏಪ್ರಿಲ್ 14 ರಂದು ಆಚರಿಸಬೇಕಾಗಿತ್ತು, ಆದರೆ ವಿಧಾನಸಭೆ ಚುನಾವಣೆಯ ಸಂಹಿತೆ ಜಾರಿಯಾಗಿದ್ದರಿಂದ ಮೆರವಣಿಗೆಗೆ ಅವಕಾಶ ಇಲ್ಲದ ಕಾರಣ ಜಯಂತಿಯ ಆಚರಣೆಯನ್ನು ಮುಂದೂಡಲಾಗಿತ್ತು. ಸಾರ್ವತ್ರಿಕ ಹಬ್ಬಗಳ ಆಚರಣೆಯಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ತಪ್ಪದೇ ಆಚರಿಸಿಕೊಂಡು ಬರುತ್ತಿದ್ದ ನಾವು ಇಂದು ಆಚರಣೆ ಮಾಡಿದ್ದೇವೆ ಎಂದು ತಿಳಿಸಿದರು. ವಕೀಲ ರಾಮ್ ಬಾಬು  ಮತ್ತು ದಲಿತ ವಿದ್ಯಾರ್ಥಿ ಪರಿಷತ್ತು ಜಿಲ್ಲಾ ಸಂಚಾಲಕ  ಎಚ್. ಲಕ್ಷ್ಮಣ ಭಂಡಾರಿ ಇವರು ಮಾತನಾಡಿ ಸಂವಿಧಾನ ಶಿಲ್ಪಿ ಮತ್ತು ಅಭಿವೃದ್ಧಿಯ ಹರಿಕಾರ ಎಂದು ಕೀರ್ತಿವಂತರಾದ ಡಾ. ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜಯಂತಿಗಳನ್ನು ಆಚರಣೆ ಮಾಡುವುದಲ್ಲದೆ ಅವರು ನಮಗೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು ಶಿಕ್ಷಣದಲ್ಲಿ, ಸಾಮಾಜಿಕ ಸ್ಥರಗಳಲ್ಲಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕು ಮತ್ತು ನಾಡಿನ, ದೇಶದ ಅಭಿವೃದ್ಧಿ ಪಥದಲ್ಲಿ ಕೈ ಜೋಡಿಸಬೇಕೆಂದು ಯುವಕರಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೊಂಚಗೇರಿ ಸ. ಹ. ಪ್ರಾ. ಶಾಲೆಯ ಮುಖ್ಯಗುರು ದುರುಗಪ್ಪ, ಸಂಘಟನೆಯ ಪದಾಧಿಕಾರಿಗಳಾದ ಹೆಚ್ ಶ್ರೀಧರ. ಹನುಮೇಶ. ಮಾರೇಶ. ಕುಮಾರ. ಬಿಳೆಕಲ್ಲಪ್ಪ. ವೀರೇಶ. ಸಿದ್ದೇಶ. ಮಾಳಾಪುರ ಮಲ್ಲಯ್ಯ. ವಿಜಯ್.  ಕಲ್ಲಪ್ಪ. ಶೇಖರ್. ರಾಮು. ಶಿವಪ್ಪ. ವಾಟರ್ ಮ್ಯಾನ್ ಬಿಳಿಕಲಪ್ಪ ಇತರರು ಪಾಲ್ಗೊಂಡಿದ್ದರು.