ಮುದೇನೂರು : ಆಂಜನೇಯ ರಥೋತ್ಸವ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.31: ತಾಲೂಕಿನ ಮುದೇನೂರು ಗ್ರಾಮದಲ್ಲಿ ರಾಮನವಮಿಯಂದು ಆಂಜನೇಯ ಸ್ವಾಮಿ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು.
ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತಳಿರು, ತೋರಣಗಳಿಂದ ಅಲಂಕರಿಸಿದ್ದ ರಥಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಚಾಲನೆ ಪಡೆದುಕೊಂಡಿತು. ರಥ ಬೀದಿಯಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಕೈ ಮುಗಿದರು. ಸಮಾಳ, ನಂದಿಕೋಲು ಮಂಗಳ ವಾದ್ಯಗಳು ರಥೋತ್ಸವಕ್ಕೆ ಮೆರಗು ತಂದಿದ್ದವು.
ಜಾತ್ರೆ ಪ್ರಯುಕ್ತ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ನೆರವೇರಿದವು. ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.