ಮುದಗಲ್ : ತಾಲೂಕು ಕೇಂದ್ರ ಘೋಷಣೆಗೆ ಕರವೇ ಮನವಿ

ರಾಯಚೂರು.ಸೆ.17- ಜಿಲ್ಲೆಯ ಐತಿಹಾಸಿಕ ಪಟ್ಟಣವಾದ ಮುದಗಲ್‌ನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮುಖಂಡರು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮುದಗಲ್ ಪಟ್ಟಣ ಭೌತಿಕವಾಗಿ,ಆರ್ಥಿಕವಾಗಿ, ಪ್ರಬಲವಾಗಿದ್ದು, ತಾಲೂಕು ಕೇಂದ್ರ ರಚನೆಗೆ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದೆ. ತಾಲೂಕು ರಚನೆಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು, ಸರ್ಕಾರವು ತಾಲೂಕು ರಚನೆಗೆ ಮೀನಾಮೇಷಾ ಎಣಿಸುತ್ತಿದೆಂದು ದೂರಿದರು.
ಮುದಗಲ್ ಪಟ್ಟಣದ ವ್ಯಾಪ್ತಿಗೆ ಪುರಸಭೆ, 9 ಗ್ರಾಮ ಪಂಚಾಯತಿಗಳು, 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎಪಿಎಂಸಿ ಮಾರುಕಟ್ಟೆ, 57 ಗ್ರಾಮಗಳು, 18 ತಾಂಡಗಳು ಸೇರಿದಂತೆ ಎಲ್ಲಾ ರೀತಿಯ ಸೌಕರ್ಯವನ್ನು ಹೊಂದಿದೆಂದರು.
ಸರ್ಕಾರ ಈ ಹಿಂದೆ 43 ತಾಲೂಕುಗಳನ್ನು ಘೋಷಣೆ ಮಾಡುವ ವೇಳೆ ಮುದಗಲ್ ಪಟ್ಟಣವನ್ನು ಪರಿಗಣಿಸದೇ ನಿರ್ಲಕ್ಷ್ಯಿಸಿದ ಸಂದರ್ಭದಲ್ಲಿ ಹೋರಾಟ ಮಾಡಿದಾಗ ಇನ್ನೂ 7 ಹೊಸ ತಾಲೂಕುಗಳನ್ನು ಸೇರಿಸುವಾಗ ಮುದಗಲ್ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗುವುದೆಂದು ನೀಡಿದ ಭರವಸೆ ಹುಸಿಯಾಗಿದೆ.
ಆದ್ದರಿಂದ 33 ಸಾವಿರ ಜನ ಸಂಖ್ಯೆ ಹೊಂದಿರುವ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೂಡಲೇ ಮುದಗಲ್‌ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲು ನಿರ್ಧಾರ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ವಿನೋದ ರೆಡ್ಡಿ ಹಾಗೂ ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು.