ಮುತ್ತಿನಂತೆ ಹುಟ್ಟಿಬೆಳೆದು ಸರ್ವರ ಹೃದಯದಲ್ಲಿ ನಿಲ್ಲಬಲ್ಲ ಪತ್ರಿಕೆಯೇ ಸಂಜೆವಾಣಿ

ಬಸವಕಲ್ಯಾಣ:ಡಿ.31: ಮುತ್ತಿನಂತೆ ಹುಟ್ಟಿ, ಮುತ್ತಿನಂತೆ ಬೆಳೆದು ಸರ್ವರ ಹೃದಯದಲ್ಲಿ ಶಾಶ್ವತವಾಗಿ ನಿಲ್ಲಬಲ್ಲ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಸಂಜೆವಾಣಿ ದಿನಪತ್ರಿಕೆ ಎಂದು ಹಾರಕೂಡದ ಪೂಜ್ಯ ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ಹಾರಕೂಡದ ಹಿರೇಮಠ ಸಂಸ್ಥಾನದ ಸಭಾಂಗಣದಲ್ಲಿ ಸಂಜೆವಾಣಿ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಅನ್ಯ ಪತ್ರಿಕೆಗಳಲ್ಲಿ ಸುದ್ದಿ ವೀಕ್ಷಿಸಲು 24 ತಾಸು ಕಾಯಬೇಕಾಗುತ್ತದೆ. ಆದರೆ ಇಂದಿನ ಸುದ್ದಿ ಇಂದೇ ಸಾಯಂಕಾಲ ಐದು ಗಂಟೆಯೊಳಗಾಗಿ ಓದಬೇಕಾದರೆ ಸಂಜೆವಾಣಿ ದಿನಪತ್ರಿಕೆ ವೀಕ್ಷಿಸಬಹುದಾಗಿದೆ. ಪತ್ರಿಕೆ ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹವಾಗಿದೆ. ಸಂಜೆವಾಣಿ ದಿನಪತ್ರಿಕೆ ಅದು ಸತ್ಯದ ವಾಣಿ, ಸದ್ಬುದ್ಧಿಯ ವಾಣಿ, ಸದ್ವಿನಯದ ವಾಣಿಯಾಗಿದೆ. ಯಾರ ಒತ್ತಡಕ್ಕೂ ಮಣಿಯದೆ ವಾಸ್ತವಿಕ ಅಂಶಗಳನ್ನು ಸಾತ್ವಿಮವಾಗಿ, ಸಧೃಢವಾಗಿ ಮತ್ತು ನಿಖರವಾಗಿ ಸುದ್ದಿ ಪ್ರಕಟಿಸಲಾಗುತ್ತದೆ. ಇಂತಹ ಪತ್ರಿಕೆ ನಮ್ಮ ಶ್ರೀಮಠಕ್ಕೆ ಪ್ರತಿನಿತ್ಯ ಬರುತ್ತವೆ. ವರದಿಗಾರರು ಪ್ರತಿನಿತ್ಯ ಅಧ್ಯಯನ ಮತ್ತು ಅಧ್ಯಾಪನ ಮಾಡಿದಾಗ ಮಾತ್ರ ಉತ್ತಮ ಸುದ್ದಿಗಳನ್ನು ಜನತೆಗೆ ನೀಡಲು ಸಾಧ್ಯ. ಅಂತಹ ಸುಂದರ ಕಾರ್ಯ ಸಂಜೆವಾಣಿ ದಿನಪತ್ರಿಕೆ ಮಾಡುತ್ತಿದೆ. ಭಗವಂತನ ಕರುಣೆ ಹಾಗೂ ಆಶೀರ್ವಾದ ಸದಾ ಪತ್ರಿಕೆಯ ಹಾಗೂ ಅವರ ಸಮೂಹದ ಮೇಲಿರಲಿ. ಪತ್ರಿಕೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ. ಪ್ರತಿಯೊಬ್ಬರೂ ಸಂಜೆವಾಣಿ ದಿನದರ್ಶಿಕೆ ನಿಮ್ಮ ಮನೆ ಹಾಗೂ ಕಚೇರಿಗಳಲ್ಲಿ ಬಳಸಿರಿ ಎಂದು ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಪ್ರತಿಪಾದಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಮಾತನಾಡಿ ಹಾರಕೂಡದ ಶ್ರೀಮಠ ಹಾಗೂ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಕಾರ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶ್ಲಾಘನೀಯವಾದುದು. ದಾಸೋಹ ತತ್ವವನ್ನು ಹಿಂದಿನಿಂದಲೂ ಶ್ರೀಮಠ ಅನುಸರಿಸಿಕೊಂಡು ಬಂದಿದೆ. ಪತ್ರಕರ್ತರು, ಸಾಹಿತಿಗಳು, ಕಲಾವಿದರು ಹಾಗೂ ಬಡವರಿಗೆ ಸಹಕಾರ ನೀಡುತ್ತ ನೊಂದವರ ಬಾಳಿಗೆ ಬೆಳಕಾಗಿ ಶ್ರೀಗಳು ನಿಲ್ಲುತ್ತಿರುವುದು ಪ್ರಶಂಸನೀಯ. ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ. ಇನ್ನೂ ಹೆಚ್ಚಿನ ಪತ್ರಕರ್ತರ ಸಂಘದ ಏಳ್ಗೆಗೆ ಮಾರ್ಗದರ್ಶನ ಸಿಗಲೆಂದು ಕೋರಿದರು.
ಪೂಜ್ಯ ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರು ಸಂಜೆವಾಣಿ ದಿನಪತ್ರಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೆವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಟಿ. ಗಣೇಶಕುಮಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರಾದ ಡಾ. ಪ್ರಭುಲಿಂಗ ಸ್ವಾಮಿ, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕøತರಾದ ಸತೀಶ ಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಕಾಮಶೆಟ್ಟಿ, ಶ್ರೀಕಾಂತ ಸ್ವಾಮಿ ಸೋಲಪುರ, ರಾಜೇಂದ್ರ ಗೋಖಲೆ, ಶ್ರೀಕಾಂತ ಪಾಟೀಲ, ನಾಗರಾಜ ಹೂವಿನಳ್ಳಿ, ಕಾರ್ತಿಕ ಸ್ವಾಮಿ, ಆನಂದ ಬಿರಾದಾರ, ಮಲ್ಲಿನಾಥ ಹಿರೇಮಠ, ರಾಜಕುಮಾರ ದಿಗ್ಗಾಂವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಂಜೆವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರರಾದ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮಹಾರುದ್ರ ಡಾಕುಳಗೆ ನಿರೂಪಿಸಿದರು. ರಾಜೇಂದ್ರ ಗೋಖಲೆ ಸ್ವಾಗತಿಸಿದರು. ಶ್ರೀಕಾಂತ ಸ್ವಾಮಿ ಸೋಲಪುರ ವಂದಿಸಿದರು.