ಮುಡಾ ನಿವೇಶನ ಹಂಚಿಕೆ ಕಾನೂನು ಬದ್ಧ

ಸಂಜೆವಾಣಿ ನ್ಯೂಸ್
ಮೈಸೂರು: ಜು.10:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 50:50 ಅನುಪಾತದಡಿ ನಿವೇಶನ ಹಂಚಿಕೆ ಕಾನೂನುಬದ್ಧವಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದ್ದು, ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಕಾಂಗ್ರೆಸ್ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸ್ಪಷ್ಟಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾಗೆ ಆಗುತ್ತಿದ್ದ ನಷ್ಟ, ಭೂ ಮಾಲೀಕರ ಕಚೇರಿ ಅಲೆದಾಟ ತಪ್ಪಿಸಲು ಪ್ರಾಧಿಕಾರದ ಸಭೆಯಲ್ಲಿ ಸದಸ್ಯರು ಚರ್ಚಿಸಿ ಸರ್ವಾನುಮತದಿಂದ 50:50 ಅನುಪಾತದಲ್ಲಿ ನಿವೇಶನ ಹಂಚುವ ನಿರ್ಣಯ ಕೈಗೊಳ್ಳಲಾಗಿತ್ತು. 2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಶ್ರೀರಾಂಪುರದ ಸುಂದರಮ್ಮ ಹಾಗೂ ಮುಡಾ ವಿರುದ್ಧದ ಪ್ರಕರಣ, ಬೆಳ್ಳಿಯಪ್ಪ ಮತ್ತು ಬಿಡಿಎ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಹಾಗೂ ಇಂದೋರ್ ಅಭಿವೃದ್ಧಿ ಪ್ರಾಧಿಕಾರ ಮನೋಹರಲಾಲ್ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಧರಿಸಿ ನಿವೇಶನ ಹಂಚುವ ತೀರ್ಮಾನ ಮಾಡಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಲಿ, ಅಕ್ರಮವಾಗಲಿ ಆಗಿಲ್ಲ ಎಂದು ವಿವರಿಸಿದರು.
ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳದೇ ಅವರ ಜಮೀನನ್ನು ಬಡಾವಣೆಯಾಗಿ ಅಭಿವೃದ್ಧಿ ಪಡಿಸಿ, ಪರಿಹಾರವನ್ನೂ ಹಂಚಿಕೆ ಮಾಡದ ಹಲವು ಪ್ರಕರಣಗಳು ಮುಡಾದಲ್ಲಿದ್ದವು. ಪರಿಹಾರಕ್ಕಾಗಿ ಭೂ ಮಾಲೀಕರು ಕಚೇರಿಗೆ ಅಲೆಯುವಂತಾಗಿತ್ತು. ಶೇ.100ರಷ್ಟು ಜಮೀನನ್ನು ಮೂಲ ಮಾಲೀಕರಿಗೆ ವಾಪಸ್ ಮಾಡುವ ತೀರ್ಪನ್ನು ಹೈಕೋರ್ಟ್ ನೀಡಿದ್ದರಿಂದ ಮುಡಾಗೆ ಆಗುವ ಭಾರಿ ನಷ್ಟ ತಪ್ಪಿಸಲು ಸಭೆ ಈ ನಿರ್ಧಾರ ಮಾಡಿತ್ತು ಎಂದು ಹೇಳಿದರು.
ಸರ್ಕಾರಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಬರೆದಿದ್ದ ಪತ್ರಗಳಲ್ಲಿ ರಾಜೀವ ಹೆಸರು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಾಧಿಕಾರದ ಸಭಾ ನಿರ್ಣಯ ಎಲ್ಲರದ್ದಾಗಿರುತ್ತದೆ. ಅಸಮಾಧಾನವಿದ್ದರೆ ಮುಂದಿನ ಸಭೆಯಲ್ಲಿ ಹೇಳುವ ಹಕ್ಕು ಸದಸ್ಯರಿಗೆ ಇರುತ್ತದೆ. ಸಭೆಯ ನಿರ್ಣಯವನ್ನೂ (ಅಜೆಂಡಾ) ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿತ್ತು. ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಸಭಾ ನಿರ್ಣಯದ ವಿರುದ್ಧ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಯಾಕೆಂದರೆ ಅದು ಕಾನೂನುಬದ್ಧ ತೀರ್ಮಾನವಾಗಿದೆ ಎಂದರು.
ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎಂಟು ವಿಷಯಗಳು ಸಭೆಯ ಮುಂದೆ ಬಂದಿವೆ. ಈ ವಿಷಯಗಳನ್ನು ಕಾನೂನು ಸಲಹೆ ಪಡೆದು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಆದರೆ, ಅಧಿಕಾರಿಗಳು ಅನುಷ್ಠಾನದಲ್ಲಿ ಲೋಪ ಎಸಗಿರಬಹುದು. ಸರ್ಕಾರ ತನಿಖೆ ನಡೆಸಿ ಕ್ರಮವಹಿಸಬಹುದು. ಅದಕ್ಕೆ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಪತ್ನಿಗೆ ನೀಡಿದ ನಿವೇಶನ ಕಾನೂನುಬದ್ಧವೆ ಎಂಬ ಪ್ರಶ್ನೆಗೆ, ನಾನು ಪ್ರತಿ ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲನೆ ಮಾಡಿಲ್ಲ. ಕಳೆದ 10 ದಿನಗಳಿಂದ 50:50 ಅನುಪಾತದಡಿ ನಿವೇಶನ ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಇದರ ಬಗ್ಗೆಯಷ್ಟೇ ಉತ್ತರಿಸುವೆ ಎಂದರು.
ಅಧಿಕಾರಿಗಳ ಭ್ರಷ್ಟಾಚಾರಕ್ಕೆ ನಾವು ಹೊಣೆಯಲ್ಲ: ಮುಡಾದಲ್ಲಿ ಅಕ್ರಮ ನಡೆಯುತ್ತಿತ್ತು ಎಂಬ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕರ ಬಳಿಗೆ ಬರುವ ಜನರು ಸಾಕಷ್ಟು ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಮುಡಾದ ಪ್ರತಿ ಸಭೆಯಲ್ಲೂ ಮುನ್ನೂರರಿಂದ ನಾನೂರು ವಿಚಾರಗಳು ಚರ್ಚೆಯಾಗುತ್ತಿದ್ದವು. ಹಲವು ವಿಚಾರಗಳು ಒಂದೇ ವಿಚಾರದ ಮೇಲೆ ಇರುತ್ತಿದ್ದವು. ಅದಕ್ಕಾಗಿ ಈ ರೀತಿ ಆಗಿರಬಹುದು. ಮುಡಾದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಸಭೆಯಲ್ಲಿ ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಅದನ್ನು ಜಾರಿ ಮಾಡುವಾಗ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರೆ ನಾವು ಹೊಣೆಯಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಹಲವರು ಇದ್ದರು.