ಸಿಂಧನೂರು,ಮೇ.೩೦-
ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ತಮ್ಮ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡಬೇಕು ನಿರ್ಲಕ್ಷ್ಯ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಾಲುಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ತಾಲುಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯ, ಸಮಾಜ ಕಲ್ಯಾಣ ಶಿಶು ಅಬಿವೃದ್ಧಿ ಇಲಾಖೆ, ಸರ್ಕಾರಿ ಬಾಲಕಿಯರ ಮೆಟ್ರಿಕ್ ನಂತರ ವಸತಿ ನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವೈಯಕ್ತಿಕ ಸ್ವಚತೆ ಹಾಗೂ ಮುಟ್ಟಿನ ನೈರ್ಮಲ್ಯ ಪರಿಣಾಮ ಮತ್ತು ನಂಜಿನ ಬಗ್ಗೆ ವಿದ್ಯಾರ್ಥಿಯರಿಗೆ ಅರಿವು ಮೂಡಿಸಿದರು.
ಸ್ಯಾನಿಟರಿ, ಬಟ್ಟೆ ಟಾಪ್ ಪ್ಯಾಡ್‌ಗಳು ಇವುಗಳ ಉಪಯೋಗ ಹಾಗೂ ವಿಲೇವಾರಿ ಅವಗಳಿಂದ ಆಗುವ ಅಡ್ಡ ಪರಿಣಾಮ ಬಗ್ಗೆ ತಿಳಿಸಿದ ಅವರು ಸಾಮನ್ಯವಾಗಿ ಒಬ್ಬ ಮಹಿಳೆಯ ೨೦೦ mಐ ಋತು ಚಕ್ರವಾಗಬೇಕು ಒಂದು ಸಲ ಉಪಯೋಗ ಮಾಡಿದ ಪ್ಯಾಡನ್ನು ೩ ಅಥವಾ ೪ ಗಂಟೆ ಒಳಗೆ ಅದನ್ನು ಸೂಕ್ತ ಸ್ಥಾಳದಲ್ಲಿ ಹಾಕಬೇಕು ಎಂದರು.
ಮನೆ, ಕೆಲಸದ ಸ್ಥಳ, ಶಾಲಾ ಕಾಲೇಜುಗಳಲ್ಲಿ ಸ್ವಚ್ಛ ಶೌಚಾಲಯಗಳು ಲಭ್ಯವಿರಬೇಕು. ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಬೇಕು ಮುಟ್ಟಿನ ತ್ಯಾಜ್ಯವನ್ನು ಸೂಕ್ತ ವಾಗಿ ವಿಲೇವಾರಿ ಮಾಡಬೇಕು. ಮುಟ್ಟಿನ ಕುರಿತು ಸೂಕ್ತ ಶಿಕ್ಷಣವು ಮನೆ ಶಾಲೆ ಮಾಧ್ಯಮಗಳು ಮತ್ತು ಆಸ್ಪತ್ರೆಗಳಲ್ಲಿ ಸಿಗುವಂತಾಗಬೇಕು ಮುಜುಗರ ಬಿಟ್ಟು ಮುಟ್ಟಿನ ಬಗ್ಗೆ ಮಾತನಾಡಬೇಕು ಎಂದರು.
ವೈಯಕ್ತಿಕ ಹಾಗೂ ಹದಿಹರೆಯದ ಸಮಸ್ಯೆಗಳು ಇದ್ದಲ್ಲಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ೩೨ ಕೊಠಡಿಯಲ್ಲಿ ಇರುವ ಆಪ್ತ ಸಮಾಲೋಚಕರಿಂದ ಸಲಹೆಗಳನ್ನು ಪಡೆದುಕೊಳ್ಳಬಹುದು ಎಂದು ಗೀತಾ ಹಿರೇಮಠ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ವಿಜಯ ಜೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆಪ್ತ ಸಮಾಲೋಚಕರಾದ ರಾಮಾಂಜನೇಯ, ಅಂಗನವಾಡಿ ಮೇಲ್ವಿಚಾರಕಿ ಸರಿತಾ, ವಸತಿ ನಿಲಯದ ವಾರ್ಡ್‌ನ ಸಂಗಳ, ಹಾಗೂ ವಸತಿ ನಿಲಯ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.