ಮುಟ್ಟಿನಿಂದಲೇ ಹುಟ್ಟು ನೈಸರ್ಗಿಕ ಕ್ರಿಯೆ

ತುಮಕೂರು, ಆ. ೮- ಮಹಿಳೆಯರು ಮುಟ್ಟಾಗುವುದು ಸಹಜ. ಅದನ್ನು ಮೈಲಿಗೆ ಎಂದು ಭಾವಿಸದೆ ಅದೊಂದು ನೈಸರ್ಗಿಕ ಕ್ರಿಯೆ ಎಂದು ತಿಳಿಯಿರಿ. ಮುಟ್ಟಾದ ನಂತರವೇ ಒಂದು ಹೆಣ್ಣು ಮತ್ತೊಂದು ಜೀವದ ಹುಟ್ಟಿಗೆ ಸಿದ್ಧಳಾಗುತ್ತಾಳೆ. ಮುಟ್ಟಿನಿಂದಲೇ ಹುಟ್ಟು ಎಂಬುದನ್ನು ನಾವೆಲ್ಲರೂ ಅರಿಯಬೇಕು ಎಂದು ವರದರಾಜ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಯೋಗೀಶ್ ಡಿ.ಪಿ. ಹೇಳಿದರು.
ತಾಲ್ಲೂಕಿನ ಗೌಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೆಳೆಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದ “ಮುಟ್ಟಾದಳೇ ಪುಟ್ಟಿ” ನಾಟಕ ಪ್ರಯೋಗದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಡುಗೊಲ್ಲ ಸಮುದಾಯದಲ್ಲಿ ಮುಟ್ಟಿನ ವಿಚಾರದಲ್ಲಿ ಇನ್ನೂ ಕೂಡಾ ಕಟ್ಟುನಿಟ್ಟಿನ ಆಚರಣೆಗಳು ಕಂಡು ಬರುತ್ತಿದೆ. ಈಗಾಗಲೇ ಬಹುತೇಕ ಮಟ್ಟದಲ್ಲಿ ಜಾಗೃತರಾಗಿ ಮುಟ್ಟಾದವರನ್ನು ಊರಿನಿಂದ ಹೊರಗಿಡುವ ಈ ಪದ್ಧತಿಯಿಂದ ದೂರಾಗುತ್ತಿರುವುದು ಸಂತೋಷಕರ. ಆದರೂ, ಈ ಆಚರಣೆ ಪೂರ್ಣ ಮಟ್ಟದಲ್ಲಿ ಕೊನೆಗೊಂಡಿಲ್ಲ. ಮೌಢ್ಯಗಳಿಂದ ಕಾಡುಗೊಲ್ಲ ಸಮುದಾಯ ಹೊರಬರಬೇಕು. ಮಕ್ಕಳ ಶಿಕ್ಷಣದ ಕಡೆ ಹೆಚ್ಚು ಆಸಕ್ತಿ ತೋರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಗಂಗಾಧರ್ ಮಾತನಾಡಿ, ಇತ್ತೀಚೆಗೆ ತಾಲ್ಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ ನಿಜಕ್ಕೂ ಅಮಾನವೀಯ. ಈ ಕುರಿತು ರಾಜ್ಯ ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸುತ್ತಿದೆ. ಕಾಡುಗೊಲ್ಲ ಸಮುದಾಯದವರಿಗೆ ಅರಿವು ಮೂಡಿಸಲು ಖುದ್ದು ಹಿರಿಯ ನ್ಯಾಯಾಧೀಶರುಗಳೇ ಹಟ್ಟಿಗಳಿಗೆ ಬಂದು ಜನರೊಂದಿಗೆ ಮಾತನಾಡುತ್ತಿದ್ದಾರೆ. ಈಗಲಾದರೂ ನಾವು ಕಟ್ಟುಪಾಡುಗಳ ಸಂಕೋಲೆಯಿಂದ ಹೊರಬರಬೇಕು. ಹಟ್ಟಿಗಳಲ್ಲಿರುವ ಎಲ್ಲ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಜಿಲ್ಲಾಡಳಿತ, ಮುಂದೆ ಮತ್ತೆ ಮಲ್ಲೇನಹಳ್ಳಿಯಲ್ಲಿ ನಡೆದಂತಹ ಘಟನೆ ಎಲ್ಲಾದರೂ ಮರುಕಳಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿಯೂ ತಿಳಿಸಿದೆ ಎಂದರು.
ನೂರಾರು ವರ್ಷಗಳ ಹಿಂದೆ ಹಟ್ಟಿಗಳಲ್ಲಿ ಇದ್ದದ್ದು ಬರೀ ಗುಡಿಸಲುಗಳೇ. ಒಂದೊಂದು ಗುಡಿಸಲಲ್ಲೂ ಅವಿಭಕ್ತ ಕುಟುಂಬಗಳಿರುತ್ತಿದ್ದವು, ಜನ-ಜಾನುವಾರುಗಳೆಲ್ಲಾ ಒಂದೇ ಕಡೆ ಇರುತ್ತಿದ್ದರು. ಒಲೆ ಹಚ್ಚಿದರೆ, ಗುಡಿಸಲು ತುಂಬಾ ಹೊಗೆ ತುಂಬುತ್ತಿತ್ತು. ಜನ-ಜಾನುವಾರುಗಳಿಂದ ಸೋಂಕುಗಳು ಆಗದಿರಲೆಂದು ಆಗಿನ ಕಾಲಕ್ಕೆ ವೈಜ್ಞಾನಿಕ ದೃಷ್ಟಿಯಿಂದ ಮುಟ್ಟಾದವರನ್ನು ಅಥವಾ ಬಾಣಂತಿಯರನ್ನು ಊರಿಂದ ಸ್ವಲ್ಪ ಮುಂದೆ ಮತ್ತೊಂದು ಗುಡಿಸಲು ನಿರ್ಮಿಸಿ ಅವರನ್ನು ಜೋಪಾನ ಮಾಡುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ಹೀಗಿಲ್ಲ. ಹಟ್ಟಿಗಳಲ್ಲಿ ಬಹುತೇಕ ಕಾಂಕ್ರಿಟ್ ಮನೆಗಳೇ ಇವೆ. ಪ್ರತ್ಯೇಕ ಕೊಠಡಿಗಳಿವೆ. ಸೌಕರ್ಯಗಳಿವೆ. ಮುಟ್ಟಿನ ಆಚರಣೆಗೆ ಈಗಿನ ಯುಗದಲ್ಲಿ ಅರ್ಥಹೀನ. ಮೌಢ್ಯತೆಯಿಂದ ಕೂಡಿದ ಕಟ್ಟುಪಾಡುಗಳಿಂದ ಹೊರ ಬಂದು ಸಮಾಜದ ಒಳಿತಿಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಮರುಗ ರಂಗ ಸಂಪನ್ಮೂಲ ಕೇಂದ್ರದವರಿಂದ ಗೌಡಿಹಳ್ಳಿ ಗೊಲ್ಲರಟ್ಟಿಯಲ್ಲಿ ಪ್ರದರ್ಶನಗೊಂಡ “ಮುಟ್ಟಾದಳೇ ಪುಟ್ಟಿ” ನಾಟಕ ಪ್ರಯೋಗ ಎಲ್ಲರ ಮನ ಮುಟ್ಟಿತು. ಗ್ರಾಮದ ನೂರಾರು ಮಂದಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮಂತ್ರಮುಗ್ದರಾಗಿ ನಾಟಕವನ್ನು ವೀಕ್ಷಿಸಿದರು. ನಾಟಕ ಪ್ರದರ್ಶನದ ನಂತರ ವೇದಿಕೆಯಲ್ಲಿ ಗ್ರಾಮದ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು. ಮುಟ್ಟಿನ ಆಚರಣೆ ವಿಚಾರದ ಅರಿವು ಮೂಡಿಸುವಲ್ಲಿ ಈ ನಾಟಕ ತುಂಬಾ ಪರಿಣಾಮಕಾರಿ ಎನಿಸಿತು.
ಈ ಸಂದರ್ಭದಲ್ಲಿ ಬೆಳ್ಳಾವಿ ಪೊಲೀಸ್ ಠಾಣೆ ಪಿಎಸ್‌ಐ ಭಾಗ್ಯಲಕ್ಷ್ಮಿ, ಮಂಜುನಾಥ್ ಸಿ., ಮಲ್ಲೇನಹಳ್ಳಿಯ ಜಯರಾಮ್, ಬಸವಾಪುರಹಟ್ಟಿ ಅಕ್ಷಯ್, ಹೇಮಂತ್‌ರಾಜ್, ಪುಟ್ಟರಾಜುಗೌಡ, ವಿದ್ಯಾರ್ಥಿ ಶಶಿಕುಮಾರ್ ಪಿ. ಮತ್ತಿತರರು ಉಪಸ್ಥಿತರಿದ್ದರು.
ಡಮರುಗ ರಂಗ ತಂಡ ಮೆಳೇಹಳ್ಳಿದೇವರಾಜ್ ನಿರ್ದೇಶನದಲ್ಲಿ ನಾಟಕ ಬಿತ್ತರಿಸಿತು. ರಂಗದಲ್ಲಿ ಸ್ನೇಹ, ಉಮೇಶ್, ಪ್ರಕಾಶ್, ಭರತ್, ಚಿನ್ಮಯ, ಲಯ, ದ್ರೋಣ ಅಭಿನಯಿಸಿದರು.