ಮುಟ್ಟಾಳತನದಿಂದ ಅಧಿಕಾರಕ್ಕೆ ಕಂಟಕ

ಬೆಂಗಳೂರು,ಡಿ.೩- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮುಟ್ಟಾಳತನದಿಂದಲೇ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ಮಾಜಿ ಸಚಿವ ಕೆ,ಎಸ್ ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿಯೂ ಬಿಜೆಪಿ ಒಟ್ಟಾಗಿ ಹೋಗಿದ್ದರೆ, ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಅವಲೋಕನ ಮಾಡಿ ಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಒಟ್ಟಾಗಿ ಹೋಗದೇ ಇದ್ದದ್ದು ಕಾರಣ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು ಎಂದಿದ್ದಾರೆ
ಈ ನಡುವೆ ಕಾಂಗ್ರೆಸ್ ಬಡವರಿಗೆ ಕೊಟ್ಟ ಗ್ಯಾರಂಟಿಗಳನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಇದೆಲ್ಲವೂ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ ರಾಜ್ಯಗಳೂ ಸೇರಿದಂತೆ ಇಡೀ ದೇಶದಲ್ಲಿ ಗ್ಯಾರಂಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನಿಸಿತ್ತು. ಈ ಚುನಾವಣೆಗಳಲ್ಲಿ ಅದು ವಿಫಲವಾಗಿದೆ. ಅಲ್ಲದೇ ಹಿಂದೂ-ಮುಸ್ಲಿಮರ ಬಗೆಗಿನ ತುಷ್ಟೀಕರಣ ರಾಜಕೀಯ ಇವೆಲ್ಲವೂ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರು ಇಂದೇ ಪಾಠ ಕಲಿಯಬೇಕು. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನಾಯಕರು ಮಾಡಿದ ತಪ್ಪಿಗೆ ಕಾರ್ಯಕರ್ತರು ನೊಂದಿದ್ದಾರೆ. ಆದ್ದರಿಂದ ನಾವೆಲ್ಲ ಒಂದಾಗಿ ಮುಂದಿನ ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದ್ದಾರೆ.