ಮುಜೀಬುದ್ದೀನ್ ಕಾರ್ಯ ಜನತೆಗೆ ಮೆಚ್ಚುಗೆ : ಇಂತಹ ನಾಯಕ ಅವಶ್ಯ – ವಾಹೀದ್

ರಾಯಚೂರು.ನ.೨೦- ನಗರದಲ್ಲಿ ವಿನೂತನ ಕಾರ್ಯಗಳ ಮೂಲಕ ಸೇವೆ ಮಾಡುತ್ತಿರುವ ಮುಜೀಬುದ್ದೀನ್‌ರ ಕಾರ್ಯ ನಗರಕ್ಕೆ ಅವಶ್ಯಕತೆ ಇದ್ದು, ಅವರಿಂದ ನಗರದ ಅಭಿವೃದ್ಧಿ ಸಾಧ್ಯ ಎಂದು ವಾರ್ಡ್ ನಂಬರ್ ೯ರ ನಗರಸಭೆ ಸದಸ್ಯರಾದ ಮಹ್ಮದ್ ವಾಹೀದ್ ಅವರು ಹೇಳಿದರು.
ಅವರಿಂದು ನಗರದ ವಾರ್ಡ್ ನಂಬರ್ ೯ ರಲ್ಲಿ ವಾಕ್ ಟು ವಾರ್ಡ್ ಕಾರ್ಯಕ್ರಮದಲ್ಲಿ ಮುಜೀಬುದ್ದೀನ್ ಅವರಿಗೆ ಸಾಥ್ ನೀಡಿ, ಅವರ ಜೊತೆ ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈಗಾಗಲೇ ಹಲವಾರು ವಾರ್ಡ್‌ಗಳಲ್ಲಿ ವಾಕ್ ಟು ವಾರ್ಡ್ ಕಾರ್ಯಕ್ರಮದ ಮೂಲಕ ಹಲವು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಮುಜೀಬುದ್ದೀನ್ ಅವರ ಕಾರ್ಯ ಹಿಂದಿನಿಂದಲೂ ನಡೆದಿದೆ. ಇಂದು ವಾಕ್ ಟು ವಾರ್ಡ್ ಅಭಿಯಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದು ನಮಗೆ ಸಂತಸವಾಗಿದೆ.
ಅಧಿಕಾರವಿಲ್ಲದಿದ್ದರೂ ಇಂತಹ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇಂತಹ ನಾಯಕ ನಮ್ಮ ರಾಯಚೂರು ನಗರಕ್ಕೆ ಬೇಕಾಗಿದ್ದಾರೆ ಎಂದು ಹೇಳಿದರು. ಬೆಳಿಗ್ಗೆ ೭.೪೫ ರಿಂದ ಪ್ರಾರಂಭವಾದ ವಾಕ್ ಟು ವಾರ್ಡ್ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳನ್ನು ಆಲಿಸಲಾಯಿತು. ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಮುಜೀಬುದ್ದೀನ್ ಅವರು, ಪರಿಹಾರದ ಭರವಸೆ ನೀಡಿದರು. ವಾರ್ಡ್ ನಂಬರ್ ೯ರಲ್ಲಿ ಬರುವ ವೀರಭದ್ರೇಶ್ವರ ದೇವಸ್ತಾನಕ್ಕೆ ತೆರಳಿ ಪೂಜಾರಿಗಳೊಂದಿಗೆ ಮಾತುಕತೆ ನಡೆಸಿದರು. ದೇವಸ್ಥಾನದ ಪೂಜೆ ಸಂದರ್ಭದಲ್ಲಿ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ನಂತರ ವಾರ್ಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮಾತನಾಡಿ, ಮುಜೀಬುದ್ದೀನ್ ಅವರು ಶೈಕ್ಷಣಿಕವಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ವಾಕ್ ಟು ವಾರ್ಡ್ ಕಾರ್ಯಕ್ರಮ ಉತ್ತಮ ಕಾರ್ಯವಾಗಿದ್ದು, ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡುತ್ತಿದ್ದು, ಇಂತಹ ನಾಯಕರು ನಗರಕ್ಕೆ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಜೀಮ್, ಕೆ.ರಾಜೇಶ್, ಲಕ್ಷ್ಮಣ್, ನರಸಯ್ಯ, ನಾರಾಯಣ, ದಸ್ತಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.