ಮುಗ್ಧಮಕ್ಕಳ ಸಾವಿಗೆ ಹೊಣೆ ಯಾರು

ಪಂಚಾಯತಿ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವಾಯ್ತಾ..?
ಮಾನವಿ.ಜ.೦೯- ತಾಲೂಕಿನ ಬ್ಯಾಗವಾಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹಿಂಬದಿಯ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ನಿರ್ಮಿಸಿದ್ದ ೮ ಅಡಿ ಆಳದಲ್ಲಿ ಅದೇ ಗ್ರಾಮದ ಏನು ಅರಿಯದ ಮುಗ್ಧ ಮಕ್ಕಳಾದ ಅಜಯ್ (೧೦ ), ಯಲ್ಲಾಲಿಂಗ ( ೦೮ ) ಬಿದ್ದು ಉಸಿರು ನಿಲ್ಲಿಸಿದ್ದು ಊರಿಗೆ ಊರೇ ಅಕ್ರಂದನದಲ್ಲಿ ಮುಳಿಗಿದೆ ಈ ಸಾವಿಗೆ ನೇರ ಹೊಣೆ ಯಾರದ್ದು ? ಗ್ರಾಮ ಪಂಚಾಯತಿ ನಿರ್ಲಕ್ಷ್ಯವೇ ? ಗುತ್ತಿಗೆದಾರನ ಬೇಜಾವ್ದಾರಿತನವೇ ? ಅಥಾವ ಶಾಲೆ ಶಿಕ್ಷಕ,ಆಡಳಿತ ಮಂಡಳಿಯ ನಿಸ್ಕಾಳಜಿಯೇ ? ಈ ಮಕ್ಕಳ ಸಾವಿಗೆ ಹೊಣೆ ಯಾರು, ಪಾಲಕರ ಗೋಳು ಕೇಳುವರ್ಯಾರು ಎನ್ನುವಂತಾಗಿದೆ ಎಂದು ಗ್ರಾಮಸ್ಥರು ಮಾತಾನಾಡಿಕೊಳ್ಳುತ್ತಿದ್ದಾರೆ.
ಮಾನವಿ ತಾಲೂಕಿನ ಬ್ಯಾಗವಾಟ ಗ್ರಾಮದ ಪ್ರೌಢ ಶಾಲೆಯ ಹಿಂಬದಿಯ ಗುಡ್ಡದಿಂದ ಮಳೆ ನೀರು ಬರುತ್ತಿವೆ ಅದಕ್ಕೆ ತಡೆಗೋಡೆ ಕಟ್ಟಿ ಶಾಲೆ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತದ್ದು ಎಷ್ಟು ಒಳ್ಳೆಯ ಕಾರ್ಯವೋ.! ಅದರಂತೆ ಅದು ನಿರ್ಮಾಣದ ಹಂತದಲ್ಲಿರುವಾಗ ಅದನ್ನು ನಿರ್ಲಕ್ಷ್ಯ ಮಾಡದೇ ಗುತ್ತಿಗೆದಾರನು ಆ ಭಾಗದಲ್ಲಿ ವಿದ್ಯಾರ್ಥಿಗಳಾಗಲಿ, ಮುದುಕರಾಗಲಿ, ಜಾನುವಾರುಗಳಾಗಿ ಹೋಗದಂತೆ ತಡೆಯುವುದಕ್ಕೆ ಸೂಕ್ತ ಪರಿಹಾರ ಮಾಡಿಬಹುದಾಗಿತ್ತು ? ಅದರಂತೆಯೇ ೩೨ ಅಡಿ ಉದ್ದ,೮ ಅಡಿಯಷ್ಟು ಆಳ, ೬ ಅಡಿ ಅಗಲವಾದ ಬುನಾದಿ ತೆಗೆಯುವಾಗ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದು ಅಷ್ಟು ದೊಡ್ಡ ಮಟ್ಟದಲ್ಲಿ ನೀರು ಸಂಗ್ರಹವಾದರೂ ಕೂಡ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಸದಸ್ಯರುಗಳಾಗಲಿ ಅದನ್ನು ಸರಿಪಡಿಸುವ ಕಾರ್ಯ ಬೇಗನೆ ಮಾಡಬಹುದಾಗಿತ್ತು, ಇನ್ನೂ ಬಹು ಪ್ರಮುಖವಾಗಿ ತಮ್ಮ ಪ್ರೌಢ ಶಾಲೆಯ ಸುತ್ತಮುತ್ತಲಿನಲ್ಲಿ ಯಾವ ಕೆಲಸ ನಡೆಯುತ್ತಿದೆ ಇದರಿಂದ ನಮ್ಮ ಶಾಲೆಯ ಮಕ್ಕಳಾಗಲಿ ಇತರೆ ಜಾನುವಾರುಗಳು ಬಂದರೆ ಈ ಗುಂಡಿಯಿಂದ ನಿಮಗೇನಾದರೂ ತೊಂದರೆ ಆಗಬಹುದಾ ಇದರಿಂದ ಸಂರಕ್ಷಣೆ ಮಾಡಿಕೊಳ್ಳಲು ನಾವು ಏನು ಮಾಡಬಹುದು ಎನ್ನುವ ಸಾಮಾನ್ಯ ತಿಳಿವಳಿಕೆ ಶಾಲೆಯ ಮುಖ್ಯ ಶಿಕ್ಷಕರಿಗೆ ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿ ಕೂಡ ಇದಾಗಿದೆ.
ಶಾಸಕರು,ಮಾಜಿ ಶಾಸಕರು,ಅಧಿಕಾರಿಗಳ ಭೇಟಿ
ಸೂಕ್ತ ಕಾನೂನು ಕ್ರಮ,ಶೀಘ್ರ ಪರಿಹಾರದ ಹೊಣೆ
ಈ ದುರ್ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ, ತಾಲೂಕ ಆಡಳಿತ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಇವರುಗಳು ಈ ಪ್ರಕರಣವನ್ನು ಗಂಭೀರವಾದ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವುದರ ಜೊತೆಗೆ ಮೃತ ಬಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಬೇಕಾಗಿದೆ.
ಪ್ರಕರಣದ ವಿವರ :-
ಭಾನುವಾರ ಸಂಜೆ ಶಾಲೆ ಹಿಂಬದಿಯಲ್ಲಿರುವ ಬಿಸಿಎಂ ಹಾಗೂ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಅಯ್ಯಪ್ಪ ಸ್ವಾಮಿ ಮಾಲೆದಾರಿಗಳನ್ನು ಶಬರಿಮಲೆಗೆ ಕಳಿಸುವ ಕಾರ್ಯವನ್ನು ನೋಡಲು ಅದೇ ಗ್ರಾಮದ ರಮೇಶ ನಾಯಕ ಇವರ ಪುತ್ರ ಅಜಯ್ ( ೧೦) ಹಾಗೂ ಸುರೇಶ ನಾಯಕ ಸುಪುತ್ರ ಯಲ್ಲಾಲಿಂಗ ( ೦೮ ) ಹೋಗುತ್ತಿರುವ ಸಂದರ್ಭದಲ್ಲಿ ಪ್ರೌಢ ಶಾಲೆ ಹಿಂಬದಿಯಲ್ಲಿ ಶಾಲೆ ಕಾಂಪೌಂಡ್ ನಿರ್ಮಾಣದ ಹಂತದಲ್ಲಿದ್ದು ಅದು ೩೨ ಅಡಿ ಉದ್ದ, ೬ ಅಡಿ ಅಗಲ, ೮ ಅಡಿ ಆಳವಾರುವ ಕಂದಕದಲ್ಲಿ ಬಿದ್ದು ಉಸಿರುಗಟ್ಟಿ ಮಕ್ಕಳು ಸಾವಿಗೀಡಾಗಿದ್ದು, ಪಾಲಕರ ಆಕ್ರಂದನ, ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕ್ಕೆ ಪೋಲಿಸ್ ಇಲಾಖೆ ಮುಂದಾಗಿದೆ…

( ಬಾಕ್ಸ್ ಐಟಂ )

ಈಗಾಗಲೇ ಗ್ರಾ,ಪಂ ನಿಂದ ತಲಾ ಐದು ಸಾವಿರ ಶವಸಂಸ್ಕಾರಕ್ಕೆ ನೀಡಲಾಗಿದ್ದು , ಇನ್ನೂ ಅಧಿಕಾರಿ ಹಾಗೂ ಶಾಸಕರ ಜೊತೆಗೆ ಚರ್ಚೆ ಮಾಡಿ ಸೂಕ್ತ ಪರಿಹಾರದ ನೆರವು ನೀಡಲಾಗುತ್ತದೆ.
-ಬಸನಗೌಡ ಬ್ಯಾಗವಾಟ
ಮಾಜಿ ಶಾಸಕ.