ಮುಗ್ಗರಿಸಿದ ಮುಂಬೈ, ಆರ್ ಸಿಬಿಗೆ 54 ರನ್ ಭರ್ಜರಿ ಜಯ

ದುಬೈ, ಸೆ.26- ಐಪಿಎಲ್ ಟೂರ್ನಿಯಲ್ಲಿಂದು 39ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 54 ರನ್ ಗಳ ಭರ್ಜರಿ ಜಯ ದಾಖಲಿಸಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ ಸಿಬಿ‌ ಗೆಲುವಿನ ಹಳಿಗೆ ಮರಳಿತು.


ಗೆಲುವಿಗೆ‌ ಅಗತ್ಯವಿದ್ದ 166 ರನ್ ಗಳ ಗುರಿಯನ್ನು ‌ಬೆನ್ನಹತ್ತಿದ ರೋಹಿತ್ ಶರ್ಮಾ ಪಡೆ, 18.1 ಓವರ್ ಗಳಲ್ಲಿ 111 ರನ್ ಗಳಿಗೆ ಸರ್ವಪತನ ಕಂಡಿತು.
ಶರ್ಮಾ 43, ಡಿ ಕಾಕ್ 24 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಆರ್ ಸಿಬಿ‌ ಬೌಲಿಂಗ್ ದಾಳಿಗೆ ದಿಟ್ಡ ಉತ್ತರ ನೀಡಲು ವಿಫಲರಾಗಿ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.
ಹರ್ಷಲ್ ಪಟೇಲ್ 4 ಯಜುವೇಂದ್ರ ಚಹಲ್ 3 ಹಾಗೂ ಮ್ಯಾಕ್ಸ್ ವೆಲ್ ಎರಡು ವಿಕೆಟ್ ಪಡೆದರು.
ಇಂದಿನ ಪಂದ್ಯದಲ್ಲಿ ಆರ್ ಸಿಬಿ‌ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನದ ಎದುರು ಮುಂಬೈ ಮಂಕಾಯಿತು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 165 ರನ್ ಗಳ ಸವಾಲಿನ ಮೊತ್ತ ಪೇರಿಸಿತು.
ನಾಯಕ ವಿರಾಟ್‌ ಕೊಹ್ಲಿ 51 ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 56 ರನ್ ಗಳಿಸಿದ್ದರಿಂದ ತಂಡದ ಮೊತ್ತ 160 ರ ಗಡಿದಾಟಿಸಲು ಪ್ರಮುಖ ಪಾತ್ರವಹಿಸಿದ್ದರು. ಕೊಹ್ಲಿ ಐಪಿಎಲ್ ನಲ್ಲಿ 42 ನೇ ಅರ್ಧಶತಕ ಬಾರಿಸಿದರು. ಶ್ರೀಕರ್ ಭರತ್ 32 ರನ್ ಗಳಿಸಿದರು.ದೇವದತ್ ಪಡಿಕ್ಕಲ್ ಕೇವಲ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಜಸ್ಪ್ರೀತ್ ಬುಮ್ರಾ ಮೂರು, ಬೋಲ್ಟ್ ,ಮಿಲ್ನೆ ಮತ್ತು ರಾಹುಲ್ ಚಹರ್ ತಲಾ ಒಂದು ವಿಕೆಟ್ ಪಡೆದರು.