ಮುಗಿಯುವ ಹಂತದಲ್ಲಿ 1ನೇ ಹಂತದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

ವಿಜಯಪುರ, ಡಿ.6-1ನೇ ಹಂತದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಮುಗಿಯುವ ಹಂತದಲ್ಲಿ ಇದೆ ಎಂದು ವಿಜಯಪುರ ವಿಮಾನ ನಿಲ್ದಾಣ ಹೋರಾಟ ಸಮಿತಿಯ ಅದ್ಯಕ್ಷ ಸತೀಶ ವಿಶ್ವನಾಥ ಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಿಜಯಪುರ ವಿಮಾನ ನಿಲ್ದಾಣ ಹೋರಾಟ ಸಮಿತಿಯ ಸರ್ವ ಸದಸ್ಯರು ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೇಟಿ ನೀಡಿದಾಗ ಮೊದಲನೆಯ ಹಂತದ ಕಾಮಗಾರಿಗಳಾದ ರನವೇ, ಟ್ಯಾಕ್ಸಿವೇ, ಏಪ್ರಾನ್ ರೋಡ, ಐಸೋಲೇಶನ್ ಬೇ, ಪಾರ್ಕಿಂಗ್, ವಿಮಾನ ನಿಲ್ದಾಣ ಅವರಣದಲ್ಲಿ ಕೂಡು ರಸ್ತೆಗಳು ಹಾಗು ಒಳ ರಸ್ತೆಗಳು ಇತ್ಯಾದಿ ಮುಗಿಯುವ ಹಂತದಲ್ಲಿದ್ದು ಕಾಮಗಾರಿಗಳು ಭರದಿಂದ ಸಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಎಟಿಆರ್-72 ಸಾಮರ್ಥದ ರನವೇ (ಅಗಲ 30ಮೀಟರ್) 2.5 ಕಿ.ಮೀ. ಮುಗಿದಿದ್ದು ಎರಬಸ್ 320 ಸಾಮರ್ಥದ ರನವೇ (ಅಗಲ 60 ಮೀಟರ್) 3.5 ಕಿ.ಮೀ. ಸಹಿತ ಮುಂಚಿತವಾಗಿಯೇ ಸಿದ್ಧತೆಯಾಗಿದೆ ರಾಜ್ಯ ಸರಕಾರದ ಅನುಮತಿಗಾಗಿ ಕಾಯುತ್ತಿದೆ. ವಿಮಾನ ನಿಲ್ದಾಣದ ಏಪ್ರಾನ್ ಆವರಣದಲ್ಲಿ ವಿದ್ಯುತ್ ಲೈನ್ ಹಾಗೂ ಕಂಬಗಳು ಇರುವದರಿಂದ ಕಾಮಗಾರಿಗೆ ಅಡಚಣೆ ಉಂಟಾಗಿದ್ದು, ಅವುಗಳನ್ನು ತೆಗೆಯಲು ವಿದ್ಯುತ್ ಇಲಾಖೆ ಹಾಗೂ ಸಂಭಂದ ಪಟ್ಟ ಅಧಿಕಾರಿಗಳು ಬೇಗನೆ ಗಮನ ಹರಿಸಬೇಕು. 2ನೇ ಹಂತದ ವಿಮಾನ ನಿಲ್ದಾಣ ನಿರ್ಮಾಣವನ್ನು ಬೇಗನೆ ಪ್ರಾರಂಭಿಸಿಬೇಕು. ಈ ಒಂದು ವಿಮಾನ ನಿಲ್ದಾಣವನ್ನು ಆದಷ್ಟು ಬೇಗನೆ ಮುಗಿಸಿ ವಿಜಯಪುರ-ಬಾಗಲಕೋಟ ಜನತೆಗೆ ಅರ್ಪಿಸಬೇಕೆಂದು ಸಚಿವ ಗೋವಿಂದ ಕಾರಜೋಳರವರು ಶತಪ್ರಯತ್ನ ನಡೆಸುತ್ತಿರುವುದಕ್ಕೆ ಸಮಿತಿಯ ಅದ್ಯಕ್ಷ ಸತೀಶ ವಿಶ್ವನಾಥ ಭಾವಿಯವರು ಸಚಿವರನ್ನು ಅಭಿನಂದಿಸಿದ್ದಾರೆ
ಸಮಿತಿಯ ಅಧ್ಯಕ್ಷರಾದ ಸತೀಶ ವಿಶ್ವನಾಥ ಭಾವಿ, ಮಹೇಶ ಖ್ಯಾತಣ್ಣನವರ, ಅಂಬಾದಾಸ ಜೋಶಿ, ಈರಣ್ಣ ಅಳ್ಳಗಿ, ರವಿ ಕಿತ್ತೂರ, ಜಿ.ಎಸ್.ಕುಲಕರ್ಣಿ, ಮಹಾದೇವ ಮಮದಾಪೂರ, ಮೋಹನ ಕೌತಾಳ ಇನ್ನಿತರರು ಉಪಸ್ಥಿತರಿದ್ದರು