ಶಿವಮೊಗ್ಗ, ಜೂ. ೨೨: ವರ್ಷಗಳೇ ಉರುಳಿದರೂ ಶಿವಮೊಗ್ಗ ನಗರದಲ್ಲಿ ೨೪ಘಿ೭ ಕುಡಿಯುವ ನೀರು ಪೂರೈಕೆ ಕಾಮಗಾರಿ ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ.
ಹಲವೆಡೆ ಬೇಕಾಬಿಟ್ಟಿಯಾಗಿ ಕಾಮಗಾರಿ ಅನುಷ್ಠಾನಗೊಳಿಸ ಲಾಗುತ್ತಿರುವ ಆರೋಪಗಳು ನಾಗರೀಕ ವಲಯದಿಂದ ಕೇಳಿಬರಲಾರಂಭಿಸಿದೆ.
ನಗರದ ಹೊರವಲಯದ ಪ್ರದೇಶಗಳಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲಸಕಾರ್ಯಗಳು ಆಮೆ ವೇಗದಲ್ಲಿದೆ. ಯಾವೊಂದು ಪ್ರದೇಶದಲ್ಲಿಯೂ ಪರಿಪೂರ್ಣವಾಗಿ ಕಾಮಗಾರಿ ನಡೆಯದೆ, ಅರ್ಧಂಬರ್ಧ ಕೆಲಸಕಾರ್ಯ
ನಡೆಸಲಾಗುತ್ತಿದೆ ಎಂದು ಕೆಲ ನಾಗರೀಕರು ದೂರುತ್ತಾರೆ.
ಪುರಲೆ ಬಡಾವಣೆಯಲ್ಲಿ ಕಾಮಗಾರಿಗೆ ಗುಂಡಿ ತೆಗೆದು ಹಾಗೆಯೇ ಬಿಟ್ಟು ಹೋಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಪಾಲಿಕೆ ಮೇಯರ್ ಅವರನ್ನು ಸ್ಥಳೀಯ ನಾಗರೀಕರು
ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಹರಿಹಾಯ್ದಿದ್ದ ಘಟನೆ ಕೂಡ ನಡೆದಿತ್ತು. ಸೋಮಿನಕೊಪ್ಪ ಬಡಾವಣೆ ಸೇರಿದಂತೆ ಇತರೆ ಇತರೆ ಬಡಾವಣೆಗಳಲ್ಲಿಯೂ ಕೂಡ ಕಾಮಗಾರಿಯೂ
ಅವ್ಯವಸ್ಥೆಯ ಆಗರವಾಗಿದ್ದು, ಅಪೂರ್ಣವಾಗಿದೆ. ‘ಸ್ಥಳೀಯ ಜನಪ್ರತಿನಿಧಿಗಳಿಗೆ, ಜಲಮಂಡಳಿ ಅಧಿಕಾರಿಗಳಿಗೆ ನಾಗರೀಕರು ಅಹವಾಲು ತೋಡಿಕೊಳ್ಳುತ್ತಿದ್ದಾರೆ.
ಮಳೆ ಆರಂಭವಾಗುವುದರೊಳಗೆ ಕಾಮಗಾರಿ ನಡೆಸಿ, ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಾಗರೀಕರು ದೂರಿದ್ದಾರೆ.
ಬಹುತೇಕ ಕಡೆ ಕಾಲಮಿತಿ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಅರ್ಧಂಬರ್ಧ ಕಾಮಗಾರಿಗಳಿಂದ ರಸ್ತೆಗಳು ಹಾಳಾಗುತ್ತಿವೆ. ನಾಗರೀಕರು ತೊಂದರೆ ಪಡುವಂತಾಗಿದೆ. ಇನ್ನಾದರೂ ಜಲ ಮಂಡಳಿ ಆಡಳಿತ ತ್ವರಿತಗತಿಯಲ್ಲಿ ಕಾಮಗಾರಿ
ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಆದ್ಯ ಗಮನಹರಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.