ಮುಗಿಯದ ಅಂದ್ರಟ್ಟ ಕಿಂಡಿ ಅಣೆಕಟ್ಟು ಬವಣೆ; ಪರ್ಯಾಯ ರಸ್ತೆಗಾದರೂ ಸೇತುವೆ ಕೊಡಿ

ಮೇಘಾ ಪಾಲೆತ್ತಾಡಿ

ಪುತ್ತೂರು, ಎ.೨೭- ಜಲಸಂರಕ್ಷಣೆ ಹಾಗೂ ಜನತೆಯ ಮೂಲಭೂತ ಸೌಕರ್ಯಕ್ಕಾಗಿ ಸುಮಾರು ೭೦ ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕಿಂಡಿಅಣೆಕಟ್ಟೊಂದು ಇದೀಗ ಅಪಾಯದ ಸ್ಥಿತಿಯಲ್ಲಿದ್ದು, ಇದರ ದುರಸ್ಥಿ ಕಾರ್ಯ ನಡೆಯದೆ ಇದೀಗ ಸ್ಥಳೀಯ ಜನತೆ ತಮ್ಮ ಊರಿನ ದಾರಿಗಾಗಿ ಹೊಸದೊಂದು ಸಂಪರ್ಕ ದಾರಿ ನಿರ್ಮಿಸಿಕೊಂಡು ಸೇತುವೆಗಾಗಿ ಸರ್ಕಾರದ ಬೇಡಿಕೆ ಮುಂದಿಟ್ಟಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಎಂಬಲ್ಲಿನ ಕೋಟಿಕಟ್ಟ ಎಂಬಲ್ಲಿ ಬಹಳ ಹಳೆಯದಾದ ಕಿಂಡಿಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಇದರ ಮೇಲೆ ಅಂದ್ರಟ್ಟ ಪ್ರದೇಶದ ಜನತೆಗೆ ದಾರಿಯನ್ನೂ ನೀಡಲಾಗಿತ್ತು. ಈ ಕಿಂಡಿಅಣೆಕಟ್ಟು ಪ್ರಸ್ತುತ ಶಿಥಿಲವಾಗಿ ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ನೂರಾರು ಬಾರಿ ಇಲ್ಲಿನ ಸ್ಥಳಿಯ ಜನತೆ ನಗರಸಭೆಯಿಂದ ಹಿಡಿದು ಮುಖ್ಯಮಂತ್ರಿ ತನಕ ಮನವಿ ಸಲ್ಲಿಸಿದ್ದಾರೆ. ಆದರೆ ಈ ಕಿಂಡಿಅಣೆಕಟ್ಟನ್ನು ದುರಸ್ಥಿ ಮಾಡುವ ಗೋಜಿಗೆ ಯಾರೂ ಮುಂದಾಗಿಲ್ಲ. ದಿನಂಪ್ರತಿ ಶಾಲಾ ಮಕ್ಕಳು, ಕೂಲಿಕಾರ್ಮಿಕರು ಇದೇ ಕಿಂಡಿಅಣೆಕಟ್ಟಿನ ಸೇತುವೆ ಮೇಲೆ ಹೋಗಬೇಕಾಗಿದ್ದು, ಮಳೆಗಾಲದಲ್ಲಂತೂ ಅತ್ಯಂತ ಪ್ರಯಾಸ ಹಾಗೂ ಅಪಾಯಕಾರಿ ದಾರಿ ಇದಾಗಿದೆ.

smart


ಅಂದ್ರಟ್ಟದಿಂದ ಕೂಡುರಸ್ತೆ, ಆನಡ್ಕ, ಶಾಂತಿಗೋಡು, ಬೊಳಿಂಜ, ದಾಸರಮೂಲೆ ಪುರುಷರಕಟ್ಟೆ ಪ್ರದೇಶವನ್ನು ಸಂಪರ್ಕಿಸುವ ಈ ಕಿಂಡಿ ಅಣೆಕಟ್ಟಿನಲ್ಲಿ ನೂರಾರು ವಿದ್ಯಾರ್ಥಿಗಳು ಆನಡ್ಕ, ಶಾಂತಿಗೋಡು ಪ್ರದೇಶದಿಂದ ಅಣೆಕಟ್ಟಿನ ಈ ಭಾಗದ ಜಿಡೆಕಲ್ಲು ಶಾಲಾ-ಕಾಲೇಜಿಗೆ ಬರುತ್ತಿರುತ್ತಾರೆ. ಸುಮಾರು ೧೫೦ ರಿಂದ ೨೦೦ ರಷ್ಟು ಮನೆಯವರು ಈ ಭಾಗವನ್ನು ಸಂಪರ್ಕಿಸಲು ಈ ಅಣೆಕಟ್ಟನ್ನು ಬಳಸುತ್ತಿದ್ದಾರೆ. ಅಲ್ಲದೆ ಅತೀ ಹತ್ತಿರದ ರಸ್ತೆ ಇದಾಗಿದೆ. ರಕ್ಷಣಾ ಬೇಲಿ ಇಲ್ಲದ ಈ ಕಿಂಡಿ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಬರುವ ಪರಿಸ್ಥಿತಿ ಉಂಟಾಗಿದೆ. ಈ ದಾರಿ ಕಡಿದುಹೋದರೆ ಸುತ್ತಾಗಿ ಅಂದರೆ ಸುಮಾರು ೧೦ ಕಿ.ಮೀ. ಅಧಿಕ ಉದ್ದದ ರಸ್ತೆ ಕ್ರಮಿಸಬೇಕಾಗುತ್ತದೆ.
ಕಳೆದ ಮಳೆಗಾಲದಲ್ಲಿ ರಕ್ಷಣಾ ಬೇಲಿ ಇಲ್ಲದ ಈ ಕಿಂಡಿ ಅಣೆಕಟ್ಟಿನಲ್ಲಿ ನಡೆದು ಹೋಗುತ್ತಿದ್ದ ಕಾರ್ಮಿಕರೊಬ್ಬರು ಅಕಸ್ಮಾತ್ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿದ್ದರು. ಈ ಮಳೆಗಾದಲ್ಲಾದರೂ ಕಿಂಡಿ ಅಣೆಕಟ್ಟು ದುರಸ್ತಿ ಕಂಡು ಸಾರ್ವಜನಿಕರ ಉಪಯೋಗಕ್ಕೆ ಬರುವ ನಿರೀಕ್ಷೆಯಲ್ಲಿದ್ದ ಸ್ಥಳೀಯ ಜನರ ಭರವಸೆ ಕೇವಲ ಕನಸಾಗಿಯೇ ಉಳಿದಿದೆ.
ಇದೀಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿದೆ. ಮತ್ತೆ ಅಂದ್ರಟ್ಟ ಭಾಗದ ಜನತೆಗೆ ಆತಂಕ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಇಲ್ಲಿನ ಜನತೆಯ ಪಾಲಿಗೆ ಮೌನನವಾಗಿರುವುದು ಇಲ್ಲಿನ ಜನತೆಗೆ ಹತಾಶೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಇದೀಗ ಈ ಸಂಪರ್ಕ ರಸ್ತೆಯ ಬದಲಿಗೆ ಬೇರೆ ಸಂಪರ್ಕ ರಸ್ತೆ ನಿರ್ಮಾಣ ಮಾಡಿರುವ ಇಲ್ಲಿನ ಜನತೆ ಈ ಸಂಪರ್ಕ ರಸ್ತೆಗೆ ನೂತನ ಸೇತುವೆಗಾಗಿ ಬೇಡಿಕೆ ಇಟ್ಟಿದ್ದಾರೆ. ಕಳೆದ ೨೦ ವರ್ಷಗಳಿಂದ ಕಿಂಡಿಅಣೆಕಟ್ಟು ದುರಸ್ಥಿಗೆ ಬೇಡಿಕೆ ಇಟ್ಟಿದ್ದರೂ ಫಲ ಕಾಣದ ಈ ಜನತೆಗೆ ಭಾವನೆಗಳಿಗೆ ಜನಪ್ರತಿನಿಧಿಗಳು ಇನ್ನಾದರೂ ಹೊಸ ಸೇತುವೆ ನಿರ್ಮಾಣ ಮಾಡಲು ಮುಂದಾಗುತ್ತಾರೋ ಎಂಬುವುದನ್ನು ಕಾದು ನೋಡಬೇಕಾಗಿದೆ.

ಮುಂದಿನ ವರ್ಷದಲ್ಲಿ ಸೇತುವೆ..
ತಾಲೂಕಿನ ನರಿಮೊಗರು ಹಾಗೂ ಚಿಕ್ಕಮುಡ್ನೂರು ಗ್ರಾಮವನ್ನು ಸಂಪರ್ಕಿಸುವ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ-ದಾಸರಮೂಲೆ ಸಂಪರ್ಕಿಸುವ ಹಳೆಯ ಕಿಂಡಿ ಅಣೆಕಟ್ಟು ಶಿಥಿಲಗೊಂಡಿದೆ. ಅಲ್ಲದೆ ಇದೇ ಭಾಗದ ಪಂಜಿಗ ಎಂಬಲ್ಲಿ ಹೊಳೆಗೆ ಅಣೆಕಟ್ಟು ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಮುಖಾಂತರ ಕೆಆರ್‌ಡಿಸಿಲ್ ಹಾಗೂ ಸಣ್ಣ ನೀರಾವರಿ ಇಲಾಖೆಗೆ ೨೦೨೦ ರಲ್ಲಿ ತಲಾ ಎರಡು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ.

ಇದೀಗ ಅಂದ್ರಟ್ಟ ಎಂಬಲ್ಲಿ ಹಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಊರವರು ಸೇರಿ ಪರ್ಯಾಯವಾಗಿ ಹೊಸದಾದ ರಸ್ತೆ ನಿರ್ಮಿಸಿದ್ದಾರೆ. ಎರಡು ಕಡೆಗಳಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ
mಸಂಜೀವ ಮಠಂದೂರು, ಶಾಸಕರು, ಪುತ್ತೂರು

ಸೇತುವೆ ಕೊಡಿ
ಈಗಿರುವ ಕಿಂಡಿ ಅಣೆಕಟ್ಟು ಅಪಾಯದ ಸ್ಥಿತಿಯಲ್ಲಿರುವುದರಿಂದ ಇದರ ಬಳಕೆಯ ಆಸೆಯನ್ನು ನಾವು ಬಿಟ್ಟಿದ್ದೇವೆ. ಇದೀಗ ಊರವರು ಸೇರಿಕೊಂಡು ಪರ್ಯಾ ರಸ್ತೆಯನ್ನು ನಿರ್ಮಿಸಿದ್ದೇವೆ. ಈ ರಸ್ತೆ ನಿರ್ಮಾಣಕ್ಕೆ ಚಿಕ್ಕಮುಡ್ನೂರು ಗ್ರಾಪಂನವರು ೭೦ ಸಾವಿರ ನೀಡಿದ್ದಾರೆ. ಉಳಿದ ಹಣವನ್ನು ಊರವರಿಂದ ಸಂಗ್ರಹಿಸಿದ್ದೇವೆ. ಈ ಕಿಂಡಿನ ಅಣೆಕಟ್ಟಿನಲ್ಲಿ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ತೊಂದರೆ ಉಂಟಾಗುತ್ತಿದೆ. ಬಹುದಿನಗಳ ಬೇಡಿಕೆ ಕಿಂಡಿ ಅಣೆಕಟ್ಟಿನ ದುರಸ್ತಿ ಈಡೇರದ ಹಿನ್ನಲೆಯಲ್ಲಿ ನಾನು ತನ್ನ ಗದ್ದೆಯನ್ನು ಕಡಿದು ಪರ್ಯಾಯ ರಸ್ತೆ ನಿರ್ಮಿಸಲು ಬಿಟ್ಟುಕೊಟ್ಟಿರುತ್ತೇನೆ. ಈ ರಸ್ತೆಗೆ ಆದಷ್ಟು ಬೇಗ ಸೇತುವೆ ನಿರ್ಮಾಣ ಆಗಬೇಕು ಎಂಬುದು ನಮ್ಮ ಬೇಡಿಕೆ.
mಸುಗಂಧಿ, ಸ್ಥಳೀಯ ನಿವಾಸಿ