ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮಧುಗಿರಿ, ಜು. ೨೭- ಮುಖ್ಯ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಮತ್ತೆ ಅದೇ ಶಿಕ್ಷಕರನ್ನು ಶಾಲೆಗೆ ನಿಯೋಜಿಸಬೇಕೆಂದು ಆಗ್ರಹಿಸಿ ಕಸಬಾ ವ್ಯಾಪ್ತಿಯ ಬಿಜವರ ಗ್ರಾಮದ ಶಿವಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಈ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣಯ್ಯನವರು ಕಳೆದ ೬ ವರ್ಷಗಳಿಂದ ಶಿವಾನಂದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ಕಳೆದ ವರ್ಷವಷ್ಟೇ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದ್ದು, ಶಾಲೆಯಲ್ಲಿ ಮಕ್ಕಳಿಗೆ ಉತ್ತಮವಾಗಿ ಪಾಠ ಪ್ರವಚನಗಳನ್ನು ಮಾಡುತ್ತಿದ್ದು, ಗ್ರಾಮಸ್ಥರೊಂದಿಗೂ ಉತ್ತಮ ಬಾಂದವ್ಯ ಹೊಂದಿದ್ದಾರೆ. ಇಂತಹ ಉತ್ತಮ ಶಿಕ್ಷಕರನ್ನು ಇತ್ತೀಚೆಗೆ ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದು, ಇದರಿಂದ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದೇ ಮುಖ್ಯ ಶಿಕ್ಷಕರನ್ನು ಮತ್ತೆ ಶಾಲೆಗೆ ನಿಯೋಜಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಸಿ ಪ್ರಾಣೇಶ್ ಭೇಟಿ ನೀಡಿ ಘಟನೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರವಿಕೀರ್ತಿ, ಚೌಡಪ್ಪ, ಧರ್ಮರಾಜ್, ಶ್ರೀನಿವಾಸ್, ಮಂಜುಪ್ರಸಾದ್, ಸಂಜಯ್, ಸುರೇಶ್ ಮತ್ತಿತರರು ಭಾಗವಹಿಸಿದ್ದರು.