
ಲಿಂಗಸಗೂರು,ಆ.೧೯-ತಾಲೂಕಿನ ಗುರುಗುಂಟ ವಲಯ ಯಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಾಲೆಗೆ ಹಾಜರಾಗದಿರುವುದು ಮಕ್ಕಳ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರಿದೆ. ತಕ್ಷಣ ಶಿಕ್ಷಕ ನಾಗನಗೌಡರವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಖ್ಯ ಶಿಕ್ಷಕ ನಾಗನಗೌಡ ಕಳೆದ ಹಲವು ದಿನಗಳಿಂದ ಶಾಲೆಗೆ ಗೈರಾಗುತ್ತಿದ್ದಾರೆ. ಇದು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಹಾಗೂ ಇತರ ತರಗತಿಗಳ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶಿಕ್ಷಕ ನಾಗನಗೌಡ ಅವರ ಈ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥರು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈಗಾಗಲೇ ನಾಗನಗೌಡ ಶಾಲೆಗೆ ಗೈರಾಗುತ್ತಿರುವ ಕುರಿತು ಸೂಕ್ತ ಕ್ರಮ ಜರುಗಿಸಲು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಪಾಲಕರು ಕ್ಷೇತ್ರಾ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಶಾಲೆಯಲ್ಲಿ ಒಟ್ಟು ೩೫೧ ವಿದ್ಯಾರ್ಥಿಗಳಿದ್ದು, ಕೇವಲ ೫ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ ೫ ಶಿಕ್ಷಕರಲ್ಲಿ ಮುಖ್ಯ ಶಿಕ್ಷಕ ನಾಗನಗೌಡ ನಿರಂತರವಾಗಿ ಗೈರಾಗುತ್ತಿದ್ದು, ಹಾಜರಿ ಪುಸ್ತಕದಲ್ಲಿ ಮಾತ್ರ ಗೈರು ನಮೂದಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಶಾಲೆಗೆ ಒಟ್ಟು ೭ ಶಿಕ್ಷಕರ ಅವಶ್ಯಕತೆ ಇದ್ದರು. ಇರುವ ೫ ಶಿಕ್ಷಕರಲ್ಲೇ ಮುಖ್ಯ ಶಿಕ್ಷಕ ನಾಗನಗೌಡ ನಿರಂತರವಾಗಿ ಗೈರಾಗುತ್ತಿರುವುದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ, ನಾಗಪ್ಪ, ಚಂದಹುಸೇನ್, ಹುಸೇನ್ ಪಾಷಾ, ಅಣ್ಣಯ್ಯ, ಬಸವರಾಜ ಶಿವಶಂಕರ ಇತರರು ಇದ್ದರು.