ಮುಖ್ಯ ರಸ್ತೆಗಳಲ್ಲಿಯೇ ಸ್ಮಾರ್ಟ್ ಸಿಟಿ ನಿಧಾನಗತಿ ಕಾಮಗಾರಿ

ದಾವಣಗೆರೆ.ಜೂ.೭; ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪ್ರಾರಂಭವಾಗುವುದು ಮಾತ್ರ ಸತ್ಯ, ಕಾಮಗಾರಿ ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಉಪಯೋಗಿಸಲು ಅನುಕೂಲ ಮಾಡಿಕೊಡುವುದು ಮಾತ್ರ ಸುಳ್ಳು ಎಂಬಂತಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಹರೀಶ್ ಬಸಾಪುರ ಆರೋಪಿಸಿದ್ದಾರೆ.
ಬಂಬೂ ಬಜಾರ್ ನಲ್ಲಿ ಕಳೆದ 15 ದಿನಗಳಿಂದ ಕಾಮಗಾರಿ ನಿಂತಿದ್ದು, ಮುಖ್ಯರಸ್ತೆಯನ್ನು ಬಂದ್ ಮಾಡಿ ದ್ವಿಚಕ್ರ ವಾಹನಗಳು ಓಡಾಡಲು ಒಂದು ಕಲ್ಲನ್ನು ಹಾಕಿ ಬಿಟ್ಟಿರುವುದನ್ನು ನೋಡಿದರೆ, ಇದು ಸ್ಮಾರ್ಟ್ ಸಿಟಿ ಕೆಲಸವೋ ಅಥವಾ ತೇಪೆ ಕೆಲಸವೋ ಎಂಬಂತಾಗಿದೆ.
ಇದು ಜಿಲ್ಲಾ ಮುಖ್ಯ ರಸ್ತೆಯಾಗಿದ್ದು ಬಸಾಪುರ, ಲಿಂಗದಳ್ಳಿ, ಐಗೂರು, ಅಗಸನಕಟ್ಟೆ, ಗುಡಾಳ್, ಗುಮ್ಮನೂರು, ಹುಣಸೇಕಟ್ಟೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ತಲುಪಲು ಇರುವ ಮಾರ್ಗವಾಗಿದ್ದು, ಹಾಗೆಯೇ ರೈಸ್ ಮಿಲ್ ಗಳು ಇಲ್ಲೇ ಇರುವುದರಿಂದ ಲಾರಿಗಳು ಓಡಾಡುವುದು ಸರ್ವೇಸಾಮಾನ್ಯವಾಗಿದೆ. ಇಂತಹ ರಸ್ತೆಯ ಸ್ಥಿತಿಯೇ ಹೀಗಾದರೆ ಬೇರೆ ಕಡೆ ಇನ್ನೇನು ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.ಇದರ ಬಗ್ಗೆ ಸ್ಮಾರ್ಟ್ ಸಿಟಿ ಎಂ ಡಿ ರವೀಂದ್ರ ಮಲ್ಲಾಪುರ ರವರನ್ನು ಸಂಪರ್ಕಿಸಿದಾಗ, ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಶೀಘ್ರವೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದು, ಅನಾಹುತ ಆಗುವ ಮೊದಲು, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ವಿನಂತಿಸಿದ್ದಾರೆ.