ಮುಖ್ಯ ಪೇದೆ ಸಾವಿನ ಪ್ರಕರಣದಲ್ಲಿ ಸಾಯಬಣ್ಣ ಬಂಧನ: ನಿಷ್ಪಕ್ಷ ಸಿಐಡಿ ತನಿಖೆಗೆ ಶೋಭಾ ಬಾಣಿ ಆಗ್ರಹ

ಕಲಬುರಗಿ,ಜು.22: ಜೇವರ್ಗಿ ತಾಲ್ಲೂಕಿನ ನಾರಾಯಣಪುರ- ಹುಲ್ಲೂರ್ ಮಧ್ಯದಲ್ಲಿ ಕಳೆದ ಜೂನ್ 15ರಂದು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹರಿದು ಮುಖ್ಯ ಪೇದೆ ಮಯೂರ್ ಚವ್ಹಾಣ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕರ್ಜಗಿ ಅವರನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಆ ಪ್ರಕರಣದ ಕುರಿತು ಸಾಯಬಣ್ಣ ಕರ್ಜಗಿ ಅವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿದ್ದು, ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಬಿಜೆಪಿ ಮತ್ತು ಕೋಲಿ ಸಮಾಜದ ಹಿರಿಯ ನಾಯಕಿ ಶ್ರೀಮತಿ ಶೋಭಾ ಬಾಣಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್ 17ರಂದು ಆಲಮೇಲಕ್ಕೆ ಕಬ್ಬಿನ ಬೀಜ ತರಲು ಹೋದ ಸಾಯಬಣ್ಣ ಕರ್ಜಗಿ ಅವರನ್ನು ಪೋಲಿಸರು ಬಂಧಿಸಿ ಮಂದೇವಾಲ್- ನೇದಲಗಿ ಮಧ್ಯದಲ್ಲಿ ಆತನ ಕಣ್ಣು ಕಟ್ಟಿ ಕಾಲಿಗೆ ಗುಂಡೇಟು ಹಾಕಿದ ಪ್ರಕರಣದಲ್ಲಿ ಸಾಯಬಣ್ಣ ನಿರಪರಾಧಿಯಾಗಿದ್ದಾರೆ. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಕೇವಲ ನಾಲ್ಕು ದಿನಗಳಲ್ಲಿ ನಗರದ ಕೇಂದ್ರ ಕಾರಾಗೃಹಕ್ಕೆ ಕಳಿಸಿದ್ದು, ಅದಾದ ಒಂದು ವಾರದ ನಂತರ ಮೈಸೂರು ಜೈಲಿಗೆ ಹಾಕಿದ್ದಾರೆ ಎಂದು ದೂರಿದರು.
ಆಘಾತಕಾರಿ ಘಟನೆಯಿಂದ ತತ್ತರಿಸಿರುವ ಕುಟುಂಬಕ್ಕೆ ಹಾಗೂ ಸಾಯಬಣ್ಣ ಅವರಿಗೆ ಬಿಜೆಪಿ ಪಕ್ಷದ ಎಲ್ಲ ಮುಖಂಡರು ಸುದ್ದಿಗೋಷ್ಠಿ ಮಾಡಿ, ಹೋರಾಟ ಸಹ ರೂಪಿಸಿದರು. ನ್ಯಾಯಂಗ ತನಿಖೆಗೆ ಆಗ್ರಹಿಸಲಾಗಿತ್ತು. ಆದಾಗ್ಯೂ, ಕಳೆದ 17 ಮತ್ತು 18ರಂದು ವಿಧಾನ ಪರಿಷತ್‍ನಲ್ಲಿ ಪ್ರಕರಣದ ಕುರಿತು ಒಂದು ಗಂಟೆ ಹತ್ತು ನಿಮಿಷಗಳ ಕಾಲ ಚರ್ಚೆ ನಡೆಯಿತು. ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಎನ್. ರವಿಕುಮಾರ್, ಡಾ. ಸಾಬಣ್ಣ ತಳವಾರ್, ವೈ. ನಾರಾಯಣಸ್ವಾಮಿ, ಬಿಜೆಪಿ ಪಕ್ಷದ ಎಲ್ಲ ವಿಧಾನ ಪರಿಷತ್ ಸದಸ್ಯರು ಬಾವಿಗಿಳಿದು ಹೋರಾಟ ಮಾಡಿದರು. ಸಮಾಜದ ಹಿರಿಯರೂ ಹಾಗೂ ಆಡಳಿತ ಪಕ್ಷದ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರೂ ಸಹ ಬೆಂಬಲ ಸೂಚಿಸಿ ಸಾಯಬಣ್ಣನಿಗೆ ರೌಡಿಶೀಟರ್ಸ್ ಹೇಗೆ ಸುಳ್ಳು ಪ್ರಕರಣ ದಾಖಲಿಸಿದರು ಎಂಬುದರ ಕುರಿತು ವಿವರಿಸಿದರು ಎಂದು ಅವರು ಹೇಳಿದರು.
ಪಕ್ಷದವರು ನ್ಯಾಯಾಂಗ ತನಿಖೆಗೆ ಪಟ್ಟು ಹಿಡಿದಾಗ ಗೃಹ ಸಚಿವರು ನಮಗೂ ಸತ್ಯ ಹೊರಬರಬೇಕಾಗಿದೆ. ಘಟನೆಯನ್ನು ಸಿಐಟಿಗೆ ವಹಿಸಲಾಗಿದೆ ಎಂದು ಹೇಳಿದರು. ಪರಿಣಾಮ ಎಲ್ಲ ಸದಸ್ಯರು ಸ್ವಾಗತಿಸಿದರು. ಸಿಐಡಿ ತನಿಖೆಯ ಕುರಿತು ನಮಗೂ ಅನುಮಾನವಿದೆ. ಆದಾಗ್ಯೂ, ನಿಷ್ಪಕ್ಷಪಾತ ತನಿಖೆ ಆಗಬೇಕು. ಒಂದು ವೇಳೆ ಆಗದೇ ಹೋದಲ್ಲಿ ಸಮಾಜವು ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮತ್ತು ಕೋಲಿ ಸಮಾಜದ ಹಿರಿಯ ಮುಖಂಡರಾದ ಶರಣಪ್ಪ ತಳವಾರ್, ಅವ್ವಣ್ಣ ಮ್ಯಾಕೇರಿ, ಜೆಡಿಎಸ್ ಮುಖಂಡ ಶಿವಕುಮಾರ್ ನಾಟೀಕಾರ್, ಭೀಮರಾಯ್ ಜನಿವಾರ್, ಮಲ್ಲಿಕಾರ್ಜುನ್ ಎಮ್ಮಿನೂರ್, ಶಿವಪುತ್ರ ಕೋಣಿನ್, ಭೂತಾಳಿ ವಕೀಲರು, ಜೆಟ್ಟೆಪ್ಪ ದೊಣ್ಣಿ, ದತ್ತು ಇಟಗಾ ಮುಂತಾದವರು ಉಪಸ್ಥಿತರಿದ್ದರು.